ಐಎಎಸ್ ಅಧಿಕಾರಿಗೇ ಉಂಡೆನಾಮ.! ಎಟಿಎಂ ಕಾರ್ಡ್ ಇರೋರು ಓದಲೇಬೇಕಾದ ಸುದ್ದಿ..!

ATM--01

ಬೆಂಗಳೂರು,ಡಿ.5- ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಐಎಎಸ್ ಅಧಿಕಾರಿ ಬಿ.ಬಸವರಾಜು ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಬ್ಯಾಂಕ್‍ನ ಮಾಹಿತಿಯನ್ನು ಪಡೆದು ಒಂದು ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಈ ಘಟನೆ ನ.19ರಂದು ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಬಸವರಾಜು ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ದೂರು ದಾಖಲಿಸಿಕೊಂಡಿರುವ ಪೊಲೀಸರು ಐಎಎಸ್ ಅಧಿಕಾರಿಗೆ ಟೋಪಿ ಹಾಕಿ ತಲೆಮರೆಸಿಕೊಂಡಿರುವ ಕಿಲಾಡಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

# ನಡೆದದ್ದೇನು?:
ರಾಜ್ಯ ಸಾರಿಗೆ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಬಸವರಾಜು ಅವರಿಗೆ ನ.19ರಂದು ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಉದ್ಯೋಗಿಯಾಗಿದ್ದು, ನಿಮ್ಮ ಖಾತೆಯ ವಿವರಗಳನ್ನು ನೀಡಬೇಕೆಂದು ಮನವಿ ಮಾಡಿದ. ಕೆಲಸದ ಒತ್ತಡದಲ್ಲಿದ್ದ ಬಸವರಾಜು ಆ ಕಡೆಯಿಂದ ಕರೆ ಮಾಡಿದ ವ್ಯಕ್ತಿ ಕೇಳಿದ್ದ ವಿವರಗಳನ್ನು ದೂರವಾಣಿಯಲ್ಲೇ ನೀಡುತ್ತಾ ಹೋದರು. ಮೊದಲು ಅಕೌಂಟ್ ನಂಬರ್, ಐಎಫ್‍ಎಸ್‍ಸಿ ಕೋಡ್, ಎಸ್‍ಬಿಐನ ಬ್ರಾಂಚ್, ಎಟಿಎಂ ಕಾರ್ಡ್‍ನ ಸಂಖ್ಯೆ, ಇದರ ಅವಧಿ ಎಲ್ಲಿಂದ ಆರಂಭವಾಗಿ ಎಲ್ಲಿಗೆ ಮುಗಿಯಲಿದೆ ಎಂದು ವಿಚಾರಣೆ ಮಾಡಿದ. ತಾನು ಮೋಸ ಹೋಗುತ್ತಿದ್ದೇನೆ ಎಂದು ಅರಿಯದ ಬಸವರಾಜು, ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿದ್ದ ವಂಚಕ ಕೇಳಿದ ಮಾಹಿತಿಯನ್ನೆಲ್ಲಾ ನೀಡಿದ್ದೇ ಅವರಿಗೆ ಮುಳುವಾಯಿತು.

# ಓಟಿಪಿ ನಂಬರ್‍ನಿಂದ ಎಗರಿಸಿದ ಹಣ:
ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಗಿಯುತ್ತಾ ಬಂದಿದೆ.ಅದನ್ನು ನವೀಕರಣ ಮಾಡಿಕೊಳ್ಳದಿದ್ದರೆ ನೀವು ಹಣವನ್ನು ಪಡೆಯಲು ಸಾಧ್ಯವಿಲ್ಲ. ಎಟಿಎಂ ಕಾರ್ಡ್‍ನ ಮುಂಭಾಗದಲ್ಲಿರುವ ಅವಧಿ ಹಾಗೂ ಹಿಂಭಾಗದಲ್ಲಿರುವ ನಂಬರ್ ತಿಳಿಸಬೇಕು, ನಂತರ ನಿಮಗೆ ಕೆಲವೇ ಸೆಕೆಂಡ್‍ಗಳಲ್ಲಿ ಒಂದು ಓಟಿಪಿ ನಂಬರ್ ಬರುತ್ತದೆ. ಅದನ್ನು ನನಗೆ ತಿಳಿಸಿದರೆ ನಿಮ್ಮ ಎಟಿಎಂ ನವೀಕರಣಗೊಳ್ಳುತ್ತದೆ ಎಂದು ಪುಸಲಾಯಿಸಿದ.  ಇಲಾಖೆಯ ಕೆಲಸದ ಒತ್ತಡದಲ್ಲಿದ್ದ ಬಿ.ಬಸವರಾಜು ಅವರು ವ್ಯಕ್ತಿ ಕೇಳಿದ ವಿವರಗಳನ್ನೆಲ್ಲ ನೀಡಿ ಮೊಬೈಲ್‍ಗೆ ಬಂದ ಓಟಿಪಿ ನಂಬರ್ ಸಹ ಅನಾಮಧೇಯ ವ್ಯಕ್ತಿಗೆ ನೀಡಿದರು. ಇದನ್ನೇ ಕಾಯುತ್ತಿದ್ದ ಈ ವ್ಯಕ್ತಿ ಬಸವರಾಜು ಖಾತೆಯಲ್ಲಿದ್ದ ಒಟ್ಟು 99,998 ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ.

ಹಣ ಡ್ರಾ ಮಾಡಿಕೊಳ್ಳುತ್ತಿದ್ದಂತೆ ಇತ್ತ ಬಸವರಾಜ್ ಮೊಬೈಲ್‍ಗೆ ಮೆಸೇಜ್ ಬಂದಿತು. ಅದನ್ನು ಪರಿಶೀಲಿಸಿದಾಗ ಅವರ ಖಾತೆಯಲ್ಲಿದ್ದ 99,998 ಹಣ ಡ್ರಾ ಮಾಡಿಕೊಳ್ಳಲಾಗಿತ್ತು. ಇದೀಗ ಹಣ ಕಳೆದುಕೊಂಡಿರುವ ಅವರು ವಿಧಾನಸಭೆ ಪೊಲೀಸ್‍ಠಾಣೆಗೆ ದೂರು ನೀಡಿದ್ದಾರೆ. ಯಾವುದೇ ಅನಾಮಧೇಯ ವ್ಯಕ್ತಿಗಳು ದೂರವಾಣಿಯಲ್ಲಿ ಬ್ಯಾಂಕ್ ವಿವರಗಳನ್ನು ನೀಡುವಂತೆ ಕೇಳಿದರೆ ನೀಡಬಾರದು. ಒಂದು ವೇಳೆ ಅಂತಹ ಕರೆಗಳು ಬಂದರೆ ಕೂಡಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Sri Raghav

Admin