ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ ಮಾಡುತ್ತಿದ್ದ ಮೂವರು ಮಹಿಳೆಯರು ಸೇರಿ ಐವರ ಸೆರೆ

ಬೆಂಗಳೂರು, ಮೇ 20- ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ನಿವೇಶನಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಕಬೀರ್ ಅಲಿ(35), ಪೈಜ್ ಸುಲ್ತಾನ(33) ಹಾಗೂ ಜಯಮ್ಮ, ಜಗದೀಶ್, ಪೂಜಾ ಬಂಧಿತರು.

ಆರೋಪಿಗಳಿಂದ 102 ಗ್ರಾಂ ಚಿನ್ನಾಭರಣ, 2.97 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಟಾಟಾ ಸಫಾರಿ ಕಾರು, ನಕಲಿ ಆದಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಕಾರ್ಡ್‍ಗಳು, ಬ್ಯಾಂಕ್ ಪಾಸ್ ಬುಕ್‍ಗಳ ನಕಲಿ ಪ್ರತಿಗಳು ಹಾಗೂ ನೊಂದಾಯಿತ ಕಾಗದ ಪತ್ರಕ್ಕೆ ನಕಲು ಪ್ರತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರದ ನರಸೀಪುರ ಗ್ರಾಮ, ಎಚ್‍ಎಂಟಿ ಲೇಔಟ್‍ನಲ್ಲಿರುವ ನಿವೇಶನವನ್ನು 1988ರಲ್ಲಿ ಸುವರ್ಣಮ್ಮ ಎಂಬುವರಿಗೆ ಹಂಚಿಕೆಯಾಗಿದ್ದು , ಇವರ ಹೆಸರಿಗೆ ಕ್ರಯ ಪತ್ರವಾಗಿರುತ್ತದೆ. ಇದೇ ಸ್ವತ್ತಿಗೆ ಸಂಬಂಧಿಸಿದಂತೆ ಆರೋಪಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮಾರಾಟ ಮಾಡಿರುವ ಬಗ್ಗೆ ಸುವರ್ಣಮ್ಮ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ತನಿಖೆ ಕೈಗೊಂಡಿದ್ದು , ತನಿಖೆ ಸಂದರ್ಭದಲ್ಲಿ ನಕಲಿ ಸುವರ್ಣಮ್ಮ ಎಂಬುವರು ತನ್ನ ಮಗಳು ಜಯಮ್ಮಳ ಹೆಸರನ್ನು ಕಲ್ಪನ ಎಂದು ನಮೂದಿಸಿ ದಾನ ಪತ್ರ ಮಾಡಿದ್ದಾರೆ. ತದನಂತರ ಕಲ್ಪನ ತನ್ನ ಗಂಡ ಜಗದೀಶನ ಹೆಸರನ್ನು ಯೋಗೇಶ್ ಎಂದು ಬದಲಿಸಿ ದಾನ ಪತ್ರವಾಗಿ ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ಯೋಗೇಶನು ಈ ನಿವೇಶನವನ್ನು ಶರ್ಲಿ ಜೋನ್ (ನಿಜವಾದ ಹೆಸರು ಫೈಜ್ ಸುಲ್ತಾನ)ಗೆ ಅಕ್ಟೋಬರ್ 2020ರಂದು ಮಾರಾಟ ಮಾಡಿ ಅಗ್ರಿಮೆಂಟ್ ಮಾಡಿಕೊಂಡಿದ್ದು, ಅಗ್ರಿಮೆಂಟನ್ನು ಜನವರಿ 2021ರಲ್ಲಿ ಕ್ಯಾನ್ಸಲ್ ಮಾಡಿಕೊಂಡಿದ್ದು, ಯೋಗೇಶನು ವೆಂಕಟನಾರಾಯಣ ಮತ್ತು ಲಲಿತಾ ಎಂಬುವರಿಗೆ ಆಗಸ್ಟ್ 2021ರಲ್ಲಿ ಮಾರಾಟ ಮಾಡಿ 65 ಲಕ್ಷ ರೂ. ಪಡೆದುಕೊಂಡಿರುವುದು ತನಿಖೆಯಿಂದ ದೃಢಪಟ್ಟಿರುತ್ತದೆ.

ಈ ಪ್ರಕರಣದಲ್ಲಿ ಎಲ್‍ಆರ್ ಬಂಡೆಯ ಪೈಜ್ ಸುಲ್ತಾನನನ್ನು ಬಂಧಿಸಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ, ಪ್ರಕರಣದ ಮುಖ್ಯ ಸೂತ್ರದಾರ ಈಕೆಯ ಸ್ನೇಹಿತ ಸಹಕಾರ ನಗರದ ಕಬೀರ್ ಅಲಿ ಎಂಬುವುದು ಗೊತ್ತಾಗಿದೆ. ಈತ ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈತ ಸುಮಾರು ವರ್ಷಗಳಿಂದ ಖಾಲಿ ಇರುವ ನಿವೇಶನಗಳನ್ನು ಹುಡುಕಿ, ಅಕ್ಕಪಕ್ಕರದಲ್ಲಿ ವಿಚಾರ ಮಾಡಿ ವಾರಸುದಾರರು ಸುಮಾರು ವರ್ಷಗಳಿಂದ ರಾಜ್ಯಕ್ಕೆ ಬರುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದನು.

ತದ ನಂತಪ ಸಬ್ ರಿಜಿಸ್ಟರ್ ಕಚೇರಿಗಳಿಂದ ನೋಂದಾಯಿತ ಪ್ರತಿಗಳನ್ನು ಪಡೆದುಕೊಂಡು ಸೈಟ್‍ನ ಮಾಲಿಕರ ಹೆಸರುಗಳಲ್ಲಿ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್‍ಗಳನ್ನು ಸೃಷ್ಟಿಸಿಕೊಂಡು ಸ್ವತ್ತನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿಕೊಂಡು, ಬಂದ ಹಣದಿಂದ ಮೋಜಿ ಮಸ್ತಿ ಮಾಡಿ ಜೀವನ ನಡೆಸುತ್ತಿದ್ದುದು ತನಿಖೆಯಿಂದ ದೃಢಪಟ್ಟಿರುತ್ತದೆ.

ಆರೋಪಿಗಳಾದ ಫೈಜ್ ಸುಲ್ತಾನ ಅಲಿಯಾಸ್ ಶರ್ಲಿ ಜೋನ್ ಮತ್ತು ಕಬೀರ್ ಅಲಿ ಇದೇ ರೀತಿಯಾಗಿ ಸಂಜಯನಗರ ಪೊಲೀಸ್ ಠಾಣಾ ಸರಹದ್ದಿನ ನಿವೇನವೊಂದಕ್ಕೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅಕ್ರಮವೆಸಗಿದ್ದು , ಈ ಬಗ್ಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆಯಲ್ಲಿರುತ್ತದೆ.

ಇವರ ಬಂಧನದಿಂದ ಒಟ್ಟು ಎರಡು ಪ್ರಕರಣಗಳು ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ ಠಾಣೆ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಪತ್ತೆ ಕಾರ್ಯವನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.