ವೈದ್ಯರ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ದುರ್ಬಳಕೆ : ಆರೋಪಿ ಸೆರೆ

Social Share

ಬೆಂಗಳೂರು, ಅ.21- ಪ್ರಖ್ಯಾತ ವೈದ್ಯರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಯೊಬ್ಬನನ್ನು ಉತ್ತರ ವಿಭಾಗದ ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಬಂಧಿತ ಆರೋಪಿ. ಈತನಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ವೈದ್ಯರಾದ ಪದ್ಮಿನಿ ಪ್ರಸಾದ್ ಅವರು ಲೈಂಗಿಕ ವಿಚಾರಗಳಲ್ಲಿ ತೊಂದರೆಯಿರುವ ಮಹಿಳೆಯರಿಗೆ ತಿಳುವಳಿಕೆ ನೀಡುವ ಸಲುವಾಗಿ ತಮ್ಮ ಹೆಸರಿನಲ್ಲಿ ಪೇಸ್‍ಬುಕ್ ಖಾತೆಗಳನ್ನು ತೆರೆದು ಅದರ ಮೂಲಕ ಲೈಂಗಿಕ ವಿಚಾರದಲ್ಲಿ ತೊಂದರೆಯಿರುವ ಮಹಿಳೆಯರಿಗೆ ಸೂಕ್ತ ತಿಳುವಳಿಕೆಯನ್ನು ನೀಡುತ್ತಿದ್ದರು.

ವೈದ್ಯರಾದ ಪದಿನಿ ಪ್ರಸಾದ್ ರವರ ಹೆಸರಿನಲ್ಲಿ ಯಾರೋ ಅಪರಿಚಿತರು ನಕಲಿ ಫೇಸ್‍ಬುಕ್ ಖಾತೆಗಳನ್ನು ತೆರೆದು ಮಹಿಳೆಯರೊಂದಿಗೆ ಅಸಭ್ಯವಾದ ಶಬ್ದಗಳನ್ನು ಬಳಸಿದ ಸಂದೇಶಗಳನ್ನು ಮತ್ತು ಧ್ವನಿ ಸಂದೇಶಗಳನ್ನು ಹಾಗೂ ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಾ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದವು.

ಪ್ರಖ್ಯಾತ ವೈದ್ಯರ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ನಕಲಿ ಪೇಸ್‍ಬುಕ್ ಖಾತೆಯಲ್ಲಿ ಸಂದೇಶ ಕಳುಹಿಸುತ್ತಿದ್ದ ಹಾಗೂ ನಕಲಿ ಫೇಸ್‍ಬುಕ್ ಖಾತೆಗಳನ್ನು ಹೊಂದಿರುವ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಇನ್ನು ಕೆಲವು ನಕಲಿ ಖಾತೆಗಳನ್ನು ತೆರೆದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಸಾರ್ವಜನಿಕರು ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Articles You Might Like

Share This Article