ಬೆಂಗಳೂರು, ಮಾ.10- ಚಿನ್ನದಂತೆ ಕಾಣುವ ನಕಲಿ ಚಿನ್ನದ ಗಟ್ಟಿಯನ್ನು ಮಾಡಿಸಿಕೊಂಡು ಆಂಧ್ರದಿಂದ ನಗರಕ್ಕೆ ಬಂದು ಅಸಲಿ ಚಿನ್ನವೆಂದು ನಂಬಿಸಿ ವಂಚಿಸಿದ್ದ ಆರೋಪಿಯೊಬ್ಬನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ನಗದು ಸೇರಿದಂತೆ ಇನ್ನಿತರ ವಸ್ತು ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಸತ್ತೇನಹಳ್ಳಿ ತಾಲೂಕು ಗೋಗುಲ ಪಾಡು ಗ್ರಾಮದ ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ(39) ಬಂಧಿತ ವಂಚಕ. ಈತ ನಗರದ ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಹೆಚ್ಚ ಗೊಲ್ಲಹಳ್ಳಿಯಲ್ಲಿ ವಾಸಿಸುತ್ತಿದ್ದನು.
ಗಿರಿನಗರದ ಟಿ ಬ್ಲಾಕ್ 50 ಅಡಿ ರಸ್ತೆ, 20ನೇ ಮುಖ್ಯರಸ್ತೆಯಲ್ಲಿ ನ್ಯೂ ಮಂಗಳೂರು ಸ್ಟೋರ್ ಎಂಬ ಅಂಗಡಿಯನ್ನು ನಿಕಿತ್ ಮೂಲ್ಯ ಎಂಬುವರು ಇಟ್ಟುಕೊಂಡಿದ್ದಾರೆ. ಹಲವು ದಿನಗಳ ಹಿಂದೆ ಶಿವ ಎಂಬ ವ್ಯಕ್ತಿ ಇವರ ಅಂಗಡಿಗೆ ಬಂದು ಸಾಮಾನುಗಳನ್ನು ಖರೀದಿಸಿ ಪರಿಚಯ ಮಾಡಿಕೊಂಡಿದ್ದಾನೆ.
ಕಾಂಗ್ರೆಸ್‌ಗೆ ಜಂಪ್ ಮಾಡಲು ಸೋಮಣ್ಣ, ನಾರಾಯಣಗೌಡ, ಪೂರ್ಣಿಮ ತಯಾರಿ
ಫೆ. 5ರಂದು ಚಿನ್ನದ ಗಟ್ಟಿಯನ್ನು ತಂದು ಅದರ ಸ್ವಲ್ಪ ಭಾಗವನ್ನು ಕತ್ತರಿಸಿ ಸ್ಯಾಂಪಲ್‍ನ್ನು ಪರಿಶೀಲಿಸಿ ಎಂದು ಕೊಟ್ಟಿದ್ದಾನೆ. ಆತ ಕೊಟ್ಟಿದ್ದ ಚಿನ್ನದ ಗಟ್ಟಿಯನ್ನು ನಿಕಿತ್ ಅವರು ಪರಿಶೀಲನೆ ಮಾಡಿಸಿದಾಗ ಚಿನ್ನವೆಂದು ಗೊತ್ತಾಗಿದೆ.
ಅಂಗಡಿ ಮಾಲೀಕರ ನಂಬಿಕೆ ಗಳಿಸಿದ ಆರೋಪಿ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಫೆ. 17ರಂದು ಮತ್ತೆ ಇವರ ಅಂಗಡಿ ಬಳಿ ಬಂದು 440 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು 13 ಲಕ್ಷ ರೂ.ಗಳಿಗೆ ಕೊಡುವುದಾಗಿ ನಿಕಿತ್ ಜೊತೆ ಮಾತನಾಡಿಕೊಂಡು ಹೋಗಿದ್ದಾನೆ.
ಪುನಃ 21ರಂದು ಮಧ್ಯಾಹ್ನ 1 ಗಂಟೆಗೆ ಇವರ ಅಂಗಡಿ ಬಳಿ ಬಂದು 13 ಲಕ್ಷ ರೂ. ಹಣ ಪಡೆದು ನಕಲಿ ಚಿನ್ನದ ಗಟ್ಟಿ ಕೊಟ್ಟು ಮೋಸ ಮಾಡಿ ಹೋಗಿದ್ದಾನೆ. ಆತ ಕೊಟ್ಟ ಚಿನ್ನದ ಗಟ್ಟಿಯನ್ನು ನಿಕಿತ್ ಅವರು ಪರಿಶೀಲನೆ ಮಾಡಿಸಿದಾಗ ಅದು ತಾಮ್ರದ ಗಟ್ಟಿ ಎಂಬುದು ಗೊತ್ತಾಗಿ ತಾವು ಮೋಸ ಹೋಗಿರುವುದನ್ನು ತಿಳಿದು ತಕ್ಷಣ ಗಿರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಪತ್ತೆ ಹಚ್ಚಿ ಬಂಧಿಸಿ 8 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಸುತ್ತಿಗೆ, ಒಂದು ಚಿಕ್ಕ ಕಬ್ಬಿಣದ ಮಚ್ಚು ಹಾಗೂ ಹಿರೋ ಹೋಂಡ ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್
ಆರೋಪಿ ಮೂಲತಃ ಆಂಧ್ರಪ್ರದೇಶದವನಾಗಿದ್ದು, ಈತ ಮೊದಲು ಚಿನ್ನದಂತೆ ಕಾಣುವ ತಾಮ್ರದ ಗಟ್ಟಿಯನ್ನು ಮಾಡಿಸಿಕೊಂಡು ಬೆಂಗಳೂರಿಗೆ ಬಂದು ಅಂಗಡಿಗಳನ್ನು ಹುಡುಕಿ ಮಾಲೀಕರ ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಗಳಿಸಿಕೊಳ್ಳುತ್ತಿದ್ದನು.
ನಂತರ ತನಗೆ ಭೂಮಿಯನ್ನು ಅಗೆಯುವಾಗ ಚಿನ್ನದ ಗಟ್ಟಿ ಸಿಕ್ಕಿದೆ ಎಂದು ಮಾಲೀಕರನ್ನು ನಂಬಿಸಿ ಮೊದಲು ಸ್ಯಾಂಪಲ್‍ಗೆಂದು ಅಸಲಿ ಚಿನ್ನವನ್ನು ಕೊಟ್ಟು ಚಿನ್ನದ ಗಟ್ಟಿಯೆಂದು ನಂಬಿಸಿ ನಂತರ ಜನರಿಗೆ ತಾಮ್ರದ ಗಟ್ಟಿಯನ್ನು ಕೊಟ್ಟು ಮೋಸದಿಂದ ಹಣ ಪಡೆದುಕೊಂಡು ಹೋಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತರಾದ ಕೃಷ್ಣಕಾಂತ್, ವಿವಿ ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜು ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ಸಬ್‍ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಜರ್ಮನಿಯಲ್ಲಿ ಗುಂಡಿನ ದಾಳಿ, 10 ಮಂದಿ ಬಲಿ
ಅಭಿನಂದನೆ:
ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರು ಈ ಉತ್ತಮ ಕಾರ್ಯವನ್ನು ಅಭಿನಂದಿಸಿರುತ್ತಾರೆ.
fake, gold, cheating, man, arrested,