ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದ ಆರೋಪಿಗಳ ಅಂದರ್

Social Share

ಚಿತ್ರದುರ್ಗ,ಜ.17- ಸಾರ್ವಜನಿಕರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲಾ ಹರಪನಹಳ್ಳಿ ಮೂಲದ ಸುರೇಶ (25), ಶೇಖರಪ್ಪ ಯಾನೆ (48) ಹಾಗೂ ಹಾಸನ ಜಿಲ್ಲಾಯ ಅರಸೀಕೆರೆ ತಾಲೂಕಿನ ಕೇಶವಮೂರ್ತಿ(30) ಬಂಧಿತ ಆರೋಪಿಗಳು.
ಚಿತ್ರದುರ್ಗ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹೋಗಿ, ನಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಬಂಗಾರ ಸಿಕ್ಕಿದೆ ಎಂದು ಹೇಳಿ ನಂಬಿಸಿ, ನಿರ್ಜನ ಪ್ರದೇಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಶುದ್ಧ ಬಂಗಾರವನ್ನು ತೋರಿಸಿ ನಂತರ, ನಕಲಿ ಬಂಗಾರ ನೀಡಿ ವಂಚಿಸುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದವು.
ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನಹೀಂ ಅಹಮ್ಮದ್ ಅವರ ನೇತೃತ್ವದಲ್ಲಿ ಪಿಎಸ್‍ಐ ಸುರೇಶ್ ಹಾಗೂ ಎಎಸ್‍ಐ ಕೆಂಚ ಲಿಂಗಪ್ಪ, ಅಲ್ಕೂರಯ್ಯ ಹಾಗೂ ಸಿಬ್ಬಂದಿ ಗುಪ್ತ ಮಾಹಿತಿ ಸಂಗ್ರಹಿಸಿದ್ದರು.
ನಗರದ ಹೊರವಲಯದ ಬಾಪೂಜಿ ಕಾಲೇಜು ಬಳಿ ಸ್ವಿಫ್ಟ್ ಕಾರಿನಲ್ಲಿ ಈ ಮೂವರು ಅನುಮಾನಸ್ಪದವಾಗಿ ವ್ಯವಹರಿಸುತ್ತಿದ್ದ ವೇಳೆ ಹಿಡಿದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.
ಆರೋಪಿತರಿಂದ ಅರ್ಧ ಕೆಜಿ ನಕಲಿ ಚಿನ್ನ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ನಗರ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಶ್ಲಾಘಿಸಿದ್ದಾರೆ.

Articles You Might Like

Share This Article