ಬೆಂಗಳೂರು,ಆ.24- ಪದವಿ ಪ್ರಮಾಣ ಪತ್ರ ಮತ್ತು ಪದವಿ ಅಂಕಪಟ್ಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಇಬ್ಬರು ವಂಚಕರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಅಯೂಬ್ ಪಾಷ ಅಲಿಯಾಸ್ ಅಯೂಬ್ (52) ಚಿಕ್ಕಬಳ್ಳಾಪುರದ ಖಲೀಲ್ ವುಲ್ಲಾ ಬೇಗ್ ಅಲಿಯಾಸ್ ಖಲೀಬ್ (52) ಬಂಧಿತ ಆರೋಪಿಗಳು.
ಬಂಧಿತರಿಂದ ಗಜರಾಜ್ ಎಂಬಾತನ ಹೆಸರಿನಲ್ಲಿರುವ ಬಿಕಾಂ ವ್ಯಾಸಂಗದ ಎರಡು ನಕಲಿ ಪದವಿ ಪ್ರಮಾಣ ಪತ್ರಗಳು ಹಾಗೂ 1ರಿಂದ 6ನೇ ಸೆಮಿಸ್ಟಾರ್‍ನ ಒಟ್ಟು 6 ನಕಲಿ ಅಂಕಪಟ್ಟಿಗಳು, ಪಿಯೂಷ್ ಕುಮಾರ್ ಹೆಸರಿನಲ್ಲಿರುವ ಬಿಕಾಂ ವ್ಯಾಸಂಗದ 2 ನಕಲಿ ಪದವಿ ಪದವಿ ಪ್ರಮಾಣ ಪತ್ರಗಳು ಮತ್ತು 1ರಿಂದ 6ನೇ ಸೆಮಿಸ್ಟಾರ್‍ನ ಒಟ್ಟು 6 ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೃಷ್ಣಸ್ವಾಮಿ ಎಂಬಾತನ ಹೆಸರಿನಲ್ಲಿರುವ ದ್ವಿತೀಯ ಪಿಯುಸಿ ವ್ಯಾಸಂಗಕ್ಕೆ ಸಂಬಂಧಪಟ್ಟ ಒಂದು ಪದವಿಪೂರ್ವ ಪ್ರಮಾಣ ಪತ್ರ, ಮಹಮದ್ ಇಮ್ರಾನ್ ಹೆಸರಿನಲ್ಲಿರುವ ಬಿಬಿಎಂ ವ್ಯಾಸಂಗದ 2 ನಕಲಿ ಪದವಿ ಪದವಿ ಪ್ರಮಾಣ ಪತ್ರಗಳು ಮತ್ತು 1ರಿಂದ 6ನೇ ಸೆಮಿಸ್ಟಾರ್‍ನ ಒಟ್ಟು 6 ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಮ್ಮದ್ ಅಜರ್ ಹೆಸರಿನಲ್ಲಿರುವ ಬಿಕಾಂ ವ್ಯಾಸಂಗದ 2 ನಕಲಿ ಪದವಿ ಪದವಿ ಪ್ರಮಾಣ ಪತ್ರಗಳು ಮತ್ತು 1ರಿಂದ 6ನೇ ಸೆಮಿಸ್ಟಾರ್‍ನ ಒಟ್ಟು 6 ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಮ್ಮದ್ ಅಂಜಾ ಖುರೇಷ್ ಹೆಸರಿನಲ್ಲಿರುವ ಬಿಇ ವ್ಯಾಸಂಗದ 1 ನಕಲಿ ಪ್ರಮಾಣ ಪತ್ರ ಮತ್ತು 4 ಅಂಕಪಟ್ಟಿಗಳು ಸೇರಿದಂತೆ ಒಟ್ಟು 38 ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ನಕಲಿ ದಾಖಲೆಗಳನ್ನು ತಯಾರು ಮಾಡಲು ಉಪಯೋಗಿಸುತ್ತಿದ್ದ ಒಂದು ಲ್ಯಾಪ್‍ಟಾಪ್, ಒಂದು ಪ್ರಿಟಿಂಗ್ ಮಿಷನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಮೊಬೈಲ್ ಹ್ಯಾಂಡ್‍ಸೆಟ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳಿಂದ 6 ಮಂದಿ ಫಲಾನುಭವಿಗಳು ಅಂಕಪಟ್ಟಿಯನ್ನು ಪಡೆದಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಇವರೆಲ್ಲರೂ ಸ್ನೇಹಿತರಾಗಿದ್ದು, ಸುಮಾರು ಎರಡುಮೂರು ವರ್ಷಗಳಿಂದ ಹೊರರಾಷ್ಟ್ರಗಳಾದ ಸೌದಿ ಅರೇಬಿಯಾ, ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಹೋಗಲು ಬಯಸುವ ವ್ಯಕ್ತಿಗಳು ಉನ್ನತ ವ್ಯಾಸಂಗ ಮಾಡದಿದ್ದರೂ ಸಹ ಅವರುಗಳಿಗೆ ಬಿಕಾಂ, ಬಿಬಿಎಂಪಿ, ಬಿಇ(ಸಿವಿಲ್) ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವಂತೆ ನಕಲಿ ಪದವಿ ಪ್ರಮಾಣಪತ್ರ,ನಕಲಿ ಪದವಿ ಅಂಕಪಟ್ಟಿಗಳನ್ನು ಸೃಷ್ಟಿ ಮಾಡಿಕೊಟ್ಟು ಅವರುಗಳಿಂದ ಅಕ್ರಮವಾಗಿ ಹಣ ಪಡೆದು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡುತ್ತಿದ್ದದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.