ನಕಲಿ ಅಂಕಪಟ್ಟಿ ದಂಧೆ: ಕಾಲೇಜು, ಶಿಕ್ಷಣ ಸಂಸ್ಥೆಗಳ ಮೇಲೆ ಸಿಸಿಬಿ ದಾಳಿ

Social Share

ಬೆಂಗಳೂರು,ಜ.27- ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ಜಾಲದ ಐದು ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿ, 6800ಕ್ಕಿಂತಲೂ ಅಧಿಕ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಾಜಿನಗರದ ನ್ಯೂ ಕ್ವೆಸ್ಟ್ ಟೆಕ್ನಾಲಜಿಸ್, ಜೆಪಿನಗರದ ಎಸ್‍ಸಿಸ್ಟಮ್ ಕ್ವೆಸ್ಟ್, ಭದ್ರಪ್ಪ ಲೇಔಟ್‍ನ ಆರೂಹಿ ಇನ್ಸ್‍ಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜು ಮತ್ತು ವಿಜಯನಗರದ ಬೆನಕ ಕರೆಸ್ಪಾಂಡೆನ್ಸ್ ಕಾಲೇಜು ಮೇಲೆ ಏಕಕಾಲದಲ್ಲಿ ಸಿಸಿಬಿ ಪೊಲೀಸ್ ತಂಡ ದಾಳಿ ಮಾಡಿ ನಕಲಿ ಅಂಕಪಟ್ಟಿಗಳು, 22 ಲ್ಯಾಪ್‍ಟಾಪ್, ಕಂಪ್ಯೂಟರ್ ಹಾಗೂ 13 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದೆ.

ನಗರದ ವಿವಿಧ ಸ್ಥಳಗಳಲ್ಲಿ ಎಜುಕೇಷನ್ ಕನ್‍ಸಲ್ಟೆಂಟ್ ಹೆಸರಿನಲ್ಲಿ ವಿವಿಧ ವಿಶ್ವವಿದ್ಯಾಲಯದ ಮತ್ತು ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿರುವ ಜಾಲದ ಬಗ್ಗೆ ಇತ್ತೀಚೆಗೆ ಸಿಸಿಬಿ ಘಟಕ ತನಿಖೆ ನಡೆಸುತ್ತಿತ್ತು.

ಆ ಸಂದರ್ಭದಲ್ಲಿ ಯಾವುದೇ ವ್ಯಾಸಂಗ ಮಾಡದೆ ಮತ್ತು ಪರೀಕ್ಷೆ ಬರೆಯದೆ ಇದ್ದರೂ ಸಹ 25ರಿಂದ 30 ಸಾವಿರ ರೂ.ಗಳಿಗೆ ಅಕ್ರಮವಾಗಿ ನಕಲಿ ಅಂಕಪ್ಟಟ್ಟಿಗಳನ್ನು ಹಾಗೂ ಪದವಿ ಸರ್ಟಿಫಿಕೇಟ್ ತಯಾರಿಸಿ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದರು.

ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಉಪವಾಸಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ರಾಜಾಜಿನಗರ, ಜೆಪಿನಗರ, ಭದ್ರಪ್ಪ ಲೇಔಟ್, ದಾಸರಹಳ್ಳಿ, ವಿಜಯನಗರದ ಸಂಸ್ಥೆಗಳವರು ವಿವಿಧ ಯೂನಿರ್ವಸಿಟಿಗಳೊಂದಿಗೆ ಶಾಮೀಲಾಗಿ ಅಥವಾ ಅವರೇ ಫೋರ್ಜರಿಯಾಗಿ ಅಂಕಪಟ್ಟಿ ತಯಾರಿಸಿ ನೀಡುತ್ತಿರುವುದು ಕಂಡುಬಂದ ಹಿನ್ನಲೆಯಲ್ಲಿ ಸಿಸಿಬಿಯ ಐದು ತಂಡಗಳು ಏಕಕಾಲದಲ್ಲಿ ಈ ಸಂಸ್ಥೆಗಳ ಮೇಲೆ ದಾಳಿ ಮಾಡಿವೆ.

ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 15 ವಿಶ್ವವಿದ್ಯಾಲಯದ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಪಿಯುಸಿಯ ಒಟ್ಟು 6800ಕ್ಕಿಂತ ಅಧಿಕ ನಕಲಿ ಅಂಕಪಟ್ಟಿಗಳನ್ನು ಮತ್ತು 22 ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳು, 13 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿ ಸಂದರ್ಭದಲ್ಲಿ ನ್ಯೂ ಕ್ವೆಸ್ಟ್ ಟೆಕ್ನಾಲಜೀಸ್ ಮತ್ತು ಸಿಸ್ಟಮ್ ಕ್ವೆಸ್ಟ್ ಸಂಸ್ಥೆ ನಡೆಸುತ್ತಿದ್ದ ಒಬ್ಬಾತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಈ ವ್ಯಕ್ತಿ ಕಳೆದ ಹಲವಾರು ವರ್ಷಗಳಿಂದ ವ್ಯವಸ್ಥಿತ ಜಾಲವನ್ನು ಹೊಂದಿ ವಿವಿಧ ಹೆಸರುಗಳಲ್ಲಿ ಶಿಕ್ಷಣ ಇಲಾಖೆಯಿಂದಾಗಲಿ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ರೀತಿಯ ಅನುಮೋದನೆ ಮತ್ತು ಪರಾವನಗಿಯನ್ನು ಪಡೆದುಕೊಳ್ಳದೆ ಕಾನೂನು ಬಾಹಿರವಾಗಿ ನಕಲಿ ಅಂಕಪಟ್ಟಿಗಳನ್ನು ವಿತರಿಸುವ ಜಾಲವನ್ನು ಹೊಂದಿರುವ ಬಗ್ಗೆ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಈ ಜಾಲದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಯ ಬಗ್ಗೆ ಮತ್ತು ಇದೇ ರೀತಿ ನಗರದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಸಂಸ್ಥೆಗಳ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ. ಈ ಕಾರ್ಯಾಚರಣೆಯನ್ನು ಬೆಂಗಳೂರುನಗರ ಸಿಸಿಬಿ ವಿಶೇಷ ವಿಚಾರಣಾದಳ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಕೈಗೊಂಡಿರುತ್ತಾರೆ.

ಸಾರ್ವಜನಿಕರ ಗಮನಕ್ಕೆ:
ಎಜುಕೇಷನ್ ಕನ್ಸಲ್ಟೆಂಟ್ , ಕರೆಸ್ಪಾಂಡೆನ್ಸ್ ಕಾಲೇಜು, ಕೋಚಿಂಗ್ ಸೆಂಟರ್ ಮುಂತಾದ ಹೆಸರುಗಳಲ್ಲಿ ಕಚೇರಿಗಳನ್ನು ತೆರೆದು ಸಾರ್ವಜನಿಕರನ್ನು ನಂಬಿಸಿ ನಕಲಿ ಅಂಕಪಟ್ಟಿ ನೀಡುತ್ತಿರುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ.

ಬಣ್ಣದ ಲೋಕದ ನಂಟು ಕಳಚಿದ `ಸಾಕ್ಷಾತ್ಕಾರ’ ನಟಿ ಜಮುನಾ

ವ್ಯಾಸಂಗ ಮಾಡದೇ ಇದ್ದರೂ ಮತ್ತು ಪರೀಕ್ಷೆ ಬರೆಯದೆ ಇದ್ದರೂ ವಿವಿಧ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಾ ಮೋಸ ಮಾಡುವ ಹಲವಾರು ನಕಲಿ ಸಂಸ್ಥೆಗಳು ನಗರದ ಹಲವಾರು ಸ್ಥಳಗಳಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು ಇಂತಹ ನಕಲಿ ಎಜುಕೇಷನ್ ಸಂಸ್ಥೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ನಕಲಿ ಅಂಕಪಟ್ಟಿಗಳ ಮಾಹಿತಿ:
ಅಣ್ಣಾಮಲೈ ಯೂನಿವರ್ಸಿಟಿಗೆ ಸಂಬಂಧಿಸಿದ 238 ನಕಲಿ ಅಂಕಪಟ್ಟಿ, ಸಿಕ್ಕಿಂ ಯೂನಿರ್ವಸಿಟಿ 5,497, ಗೀತಂ ಯೂನಿವರ್ಸಿಟಿ 728, ಬಿಐಎಸ್‍ಸಿ ಯೂನಿವರ್ಸಿಟಿ 6, ಜನಾರ್ಧನ್ ರೈನಗರ್ ಯೂನಿವರ್ಸಿಟಿ 2, ಐಬಿವಿಈ ಯೂನಿವರ್ಸಿಟಿ 12, ಕುವೆಂಪು ಯೂನಿವರ್ಸಿಟಿ 159, ಜೈನ್ ವಿಹಾರ್ ಯೂನಿವರ್ಸಿಟಿ ಜೈಪುರ್ 27, ಸಿಂಗನಿಯಾ ಯೂನಿವರ್ಸಿಟಿ ರಾಜಸ್ಥಾನ 152,

ವೆಂಕಟೇಶ್ವರ ಯೂನಿವರ್ಸಿಟಿ ಅರುಣಾಚಲಪ್ರದೇಶ 4, ಮಂಗಳೂರು ಯೂನಿವರ್ಸಿಟಿ 7, ಆರ್‍ಐಓಎಸ್ ಯೂನಿವರ್ಸಿಟಿ ಛತ್ತೀಸ್‍ಘಡ 5, ಬಿಎಸ್‍ಇಹೆಚ್ ಹುಬ್ಬಳ್ಳಿ 1, ಬೆಂಗಳೂರು ವಿವಿ 1, ಕೆಎಸ್‍ಎಸ್‍ಎಲ್ ಯೂನಿವರ್ಸಿಟಿಯ 7 ಅಂಕಪಟ್ಟಿ ಸೇರಿದಂತೆ ಒಟ್ಟು 6846 ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಉಳಿದ ಆರೋಪಿಗಳಿಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

Fake, mark sheet, racket, CCB, police, raid, colleges, educational, institutions, Bengaluru,

Articles You Might Like

Share This Article