ಖೋಟಾ ನೋಟು ಜಾಲ ಪತ್ತೆ, 1.28 ಕೋಟಿ ರೂ. ನಕಲಿ ನೋಟು ವಶ

Social Share

ಬೆಂಗಳೂರು, ಜ.6- ಭಾರತೀಯ ಕರೆನ್ಸಿ 2 ಸಾವಿರ ಹಾಗೂ 500 ರೂ. ಮುಖಬೆಲೆಯ ಖೋಟಾ ನೋಟು ತಯಾರಿ ಮಾಡಿ ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ತಮಿಳು ನಾಡಿನ ಮೂವರು ಆರೋಪಿಗಳನ್ನು ಬಂಧಿಸಿ 1.28 ಕೋಟಿ ರೂ. ಖೋಟಾ ನೋಟುಗಳು ಮತ್ತು ನೋಟು ತಯಾರಿಸಲು ಉಪಯೋಗಿಸುತ್ತಿದ್ದ ಪ್ರಿಂಟರ್ ಹಾರ್ಡ್‍ಡಿಸ್ಕ್ ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳು ನಾಡಿನ ಪಿಚ್ಚಿಮುತ್ತು(48), ನಲ್ಲಕಣಿ(53) ಮತ್ತು ಸುಬ್ರಮಣಿಯನ್(60) ಬಂಧಿತ ಆರೋಪಿಗಳು. ತಮಿಳುನಾಡಿನಲ್ಲಿ ಭಾರತೀಯ ಕರೆನ್ಸಿಯ 2 ಸಾವಿರ ಮತ್ತು 500 ರೂ. ಮುಖಬೆಲೆಯ ಖೋಟಾ ನೋಟು ಮುದ್ರಣ ಮಾಡಿಕೊಂಡು ಚಲಾವಣೆ ಮಾಡಲು ತಮಿಳುನಾಡಿನ ಬಸ್‍ನಲ್ಲಿ ಆರೋಪಿಗಳು ಬೆಂಗಳೂರಿಗೆ ಬರುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಸಿಸಿಬಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಒಬ್ಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಈ ಜಾಲದ ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಶದಿಂದ 2 ಸಾವಿರ ರೂ. ಮುಖಬೆಲೆಯ 6203 ಭಾರತೀಯ ಖೋಟಾ ನೋಟುಗಳು (1,24,06,000 ರೂ.) ಹಾಗೂ 500 ರೂ. ಮುಖಬೆಲೆಯ 174 ಭಾರತೀಯ ಖೋಟಾ ನೋಟುಗಳು (87 ಸಾವಿರ ರೂ.) ಮತ್ತು ಬಿಳಿ ಬಣ್ಣದ ರೆಡ್ಮಿ-6 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗೊರಗುಂಟೆಪಾಳ್ಯ ಎಲಿವೆಟೆಡ್ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಈ ಆರೋಪಿಗಳು 2 ಸಾವಿರ ಹಾಗೂ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ತಯಾರಿ ಮಾಡಿಕೊಂಡು ನಗರಕ್ಕೆ ಬಂದು ಅವುಗಳನ್ನು ಅಸಲಿ ನೋಟುಗಳೆಂದು ಬಿಂಬಿಸಿ ಲೋನ್ ಬೇಕಾಗಿರುವವರಿಗೆ ಆರೋಪಿಗಳಾದ ಪಿಚ್ಚಿಮುತ್ತು ಮತ್ತು ನಲ್ಲಕಣಿ ಇವರಿಬ್ಬರು ತಾವು ಫೈನಾನ್ಸಿಯಲ್ ಎಂದು ನಂಬಿಸಿ ಆರೋಪಿ ಸುಬ್ರಮಣಿಯನ್‍ನನ್ನು ಆಡಿಟರ್ ಎಂದು ಬಿಂಬಿಸಿಕೊಂಡು ಸಾರ್ವಜನಿಕರನ್ನು ನಂಬಿಸುತ್ತಿದ್ದರು.

ಲೋನ್ ಬೇಕಾಗಿರುವವರ ಬಳಿ ಮೂರ್ನಾಲ್ಕು ಬಾರಿ ಮೀಟಿಂಗ್ ಮಾಡಿದಂತೆ ವ್ಯವಹರಿಸಿ ಲೋನ್ ಮಂಜೂರಾಗಿರುವುದಾಗಿ ಅಗ್ರಿಮೆಂಟ್ ಮಾಡಿಸಬೇಕೆಂದು ಉಪನೊಂದಣಾಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಅಗ್ರಿಮೆಂಟ್ ಚಾರ್ಜ್ ಎಂದು 1 ಪರ್ಸೆಂಟ್‍ನಂತೆ ನಗದು ರೂಪದಲ್ಲಿ ಅವರಿಂದಲೇ ಹಣವನ್ನು ಪಡೆದುಕೊಂಡು ಸಾಲ ಮಂಜೂರಾಗಿರುವ ಬಗ್ಗೆ ಅಗ್ರಿಮೆಂಟ್ ಪತ್ರವನ್ನು ಮಾಡಿಸುತ್ತಿದ್ದರು.

ಅದರೊಂದಿಗೆ ಲೋನ್ ಬೇಕೆಂದವರೇ ಈಗಾಗಲೇ ಕೈ ಸಾಲ ಪಡೆದುಕೊಂಡಿರುವುದಾಗಿ ಒಂದು ಅಗ್ರಿಮೆಂಟ್ ಪತ್ರವನ್ನು ತಯಾರು ಮಾಡಿಟ್ಟುಕೊಂಡು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಎರಡೂ ಅಗ್ರಿಮೆಂಟ್ ಪತ್ರಗಳಿಗೆ ಆರೋಪಿಗಳು ಸಹಿ ಮಾಡಿಸಿಕೊಂಡಿದ್ದರು.

ನಂತರದಲ್ಲಿ ಲೋನ್ ಬೇಕೆಂದವರು ಲೋನ್ ಹಣಕ್ಕೆ ಒತ್ತಡ ಹಾಕಿದಾಗ, ಈಗಾಗಲೇ ಸಹಿ ಮಾಡಿಸಿಕೊಂಡಿದ್ದ ಅಗ್ರಿಮೆಂಟ್‍ನ್ನು ಅವರಿಗೆ ಆರೋಪಿಗಳು ತೋರಿಸಿ ನೀನೇ ಈಗಾಗಲೇ ಲೋನ್ ಪಡೆದುಕೊಂಡಿದ್ದೀಯ. ಆ ಹಣವನ್ನು ವಾಪಸ್ ಕೊಡುವಂತೆ ಎದುರಿಸಿ ಮೋಸ ಮಾಡುವ ಚಾಳಿವುಳ್ಳವರಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಸಣ್ಣ ಘಟನೆಯಾಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯ : ಏರ್ ಇಂಡಿಯಾ

ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೈಗೊಂಡು ಖೋಟಾ ನೋಟು ಚಲಾವಣೆ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳ ವಿರುದ್ಧ ತಮಿಳುನಾಡಿನಲ್ಲಿ ವಂಚನೆ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದ್ದು, ನಿಖರ ಮಾಹಿತಿ ಪಡೆಯಬೇಕಾಗಿದೆ. ತನಿಖೆ ಮುಂದುವರೆದಿದೆ.

fake notes, three arrested, ccb police,

Articles You Might Like

Share This Article