ಬೆಂಗಳೂರು, ಮಾ.13- ಚಿನ್ನಾಭರಣ ಖರೀದಿಗಾಗಿ ರಾಯಚೂರಿನಿಂದ ನಗರಕ್ಕೆ ಬಂದಿದ್ದ ಇಬ್ಬರನ್ನು ಅಡ್ಡಗಟ್ಟಿದ ಖದೀಮರು ತಾವು ಪೊಲೀಸರೆಂದು ಹೇಳಿ ತಪಾಸಣೆ ನೆಪದಲ್ಲಿ ಅವರ ಬಳಿ ಇದ್ದ 19 ಸಾವಿರ ನಗದೂ ಸೇರಿದಂತೆ 1.12 ಕೋಟಿ ಮೌಲ್ಯದ 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರಿನ ನೇತಾಜಿ ನಗರದ ಶರಫ್ ಬಜಾರ್‍ನ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಎಂಬುವರು ಚಿನ್ನ ಕಳೆದುಕೊಂಡವರು. ರಾಯಚೂರಿನ ಚಿನ್ನದ ವ್ಯಾಪಾರಿ ಮಹಮ್ಮದ್ ಖಾರ್ ಪಾಷಾ
ಎಂಬುವರ ಬಳಿ ಅಬ್ದುಲ್ ರಜಾಕ್ ಎಂಬುವರು ಕಾರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ.
ಅಬ್ದುಲ್ ರಜಾಕ್ ಅವರಿಗೆ ನೀನು ಬೆಂಗಳೂರಿಗೆ ಹೋಗಿ ರಾಜಾ ಮಾರ್ಕೆಟ್‍ನಲ್ಲಿರುವ ಬಾಪೂ ಬಾಯ್ ಮತ್ತು ಅಜಯ್-ವಿಜಯ್ ಎಂಬುವರ ಬಳಿಯಿಂದ ಚಿನ್ನದ ಗಟ್ಟಿ ತೆಗೆದುಕೊಂಡು ಬರುವಂತೆ 56 ಲಕ್ಷ ಹಣ ನೀಡಿ ಮಹಮ್ಮದ್ ಅವರು ಕಳುಹಿಸಿದ್ದಾರೆ.
ಶಾಶ್ವತವಾಗಿ ಮುಚ್ಚಿದ ಅಮೇರಿಕಾದ ಸಿಲಿಕಾನ್ ವ್ಯಾಲಿ ಬ್ಯಾಂಕ್
ಮಾ. 10ರಂದು ರಾತ್ರಿ 9.45ರ ಸುಮಾರಿಗೆ ರಾಯಚೂರಿನಿಂದ ಅಬ್ದುಲ್ ರಜಾಕ್ ಅವರು ರಾಯಚೂರಿನಿಂದ ಗ್ರೀನ್‍ಲೈಟ್ ಟ್ರಾವಲ್ಸ್ ಬಸ್ಸಿನಲ್ಲಿ ಹೊರಟು ಬೆಂಗಳೂರಿಗೆ ಮಾ. 11ರಂದು ಬೆಳಗಿನ ಜಾವ 4.45ಕ್ಕೆ ಬಂದು ಆನಂದರಾವ್ ಸರ್ಕಲ್ ಬಳಿ ಇಳಿದು ಅಲ್ಲಿಂದ ನಡೆದುಕೊಂಡು ಅಕ್ಕಿಪೇಟೆಯಲ್ಲಿರುವ ಬಾಪೂ ಭಾಯ್ ಅವರ ಮನೆಗೆ ಹೋಗಿ ವಿಶ್ರಾಂತಿ ಪಡೆದಿದ್ದಾರೆ.
ರಾಯಚೂರಿನ ನೇತಾಜಿ ನಗರದ ಶರಫ್ ಬಜಾರ್‍ನಲ್ಲಿರುವ ಚಿನ್ನದ ವ್ಯಾಪಾರಿ ಮಲ್ಲಿಕಾರ್ಜುನ್ ಎಂಬುವರ ಬಳಿ ಸಹಾಯಕರಾಗಿ ಕೆಲಸ ಮಾಡುವ ಮಲ್ಲಯ್ಯ ಎಂಬುವರಿಗೆ 54.60 ಲಕ್ಷ ರೂ. ಹಣವನ್ನು ನೀಡಿ ಬೆಂಗಳೂರಿನ ಬಾಪೂ ಭಾಯ್ ಮತ್ತು ಅಜಯ್-ವಿಜಯ್ ಎಂಬುವರಿಂದ ಚಿನ್ನದ ಗಟ್ಟಿಯನ್ನು ತರಲು ತಿಳಿಸಿದ್ದು, ಅದೇ ರೀತಿ ಮತ್ತೊಬ್ಬ ಚಿನ್ನದ ವ್ಯಾಪಾರಿ ದಿನೇಶ್ ಎಂಬುವರ ಬಳಿ ಕೆಲಸ ಮಾಡುವ ಮಲ್ಲಯ್ಯ ಅವರ ಮಗ ಸುನೀಲ್ ಕುಮಾರ್ ಅವರಿಗೂ ಅವರ ಯಜಮಾನರು 75 ಲಕ್ಷ ರೂ. ಹಣ ನೀಡಿ ಬೆಂಗಳೂರಿನ ಮನೀಶ್ ಎಂಬುವರ ಬಳಿ ಚಿನ್ನದ ಗಟ್ಟಿ ತರಲು ತಿಳಿಸಿದ್ದಾರೆ.
ಅದರಂತೆ ಮಲ್ಲಯ್ಯ ಅವರು ತಮ್ಮ ಮಗ ಸುನೀಲ್ ಕುಮಾರ್ ಅವರಿಗೆ ಬೆಂಗಳೂರಿಗೆ ಬಂದಿದ್ದು, ಮಾ. 11ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಇವರು ಅಬ್ದುಲ್ ರಜಾಕ್ ಅವರಿಗೆ ದೂರವಾಣಿ ಕರೆ ಮಾಡಿ ನಾನು ಮತ್ತು ನನ್ನ ಮಗ ಬೆಂಗಳೂರಿಗೆ ಬಂದಿದ್ದು, ಬನಾರಸ್ ಸ್ವೀಟ್ ಹೌಸ್ ಬಳಿ ಇರುವ ಆದರ್ಶ್ ಲಾಡ್ಜ್‍ನಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿ ನೀವು ಬನ್ನಿ ಎಂದು ಹೇಳಿದ್ದಾರೆ.
ಅದರಂತೆ ಅಬ್ದುಲ್ ರಜಾಕ್ ಅವರು ಆದರ್ಶ್ ಲಾಡ್ಜ್‍ಗೆ ಹೋಗಿದ್ದಾರೆ. ಅಂದು ಬೆಳಗ್ಗೆ 11.30ರ ಸುಮಾರಿಗೆ ಮನೀಶ್ ಎಂಬುವರು ಸುನೀಲ್ ಕುಮಾರ್‍ಗೆ ದೂರವಾಣಿ ಕರೆ ಮಾಡಿದ್ದು, ಅವರು ಚಿನ್ನ ತರಲು ಬಜಾರ್‍ಗೆ ಹೋದರು. ತದ ನಂತರ 12.30ರ ಸುಮಾರಿಗೆ ಮಲ್ಲಯ್ಯ ಹಾಗೂ ಅಬ್ದುಲ್ ರಜಾಕ್ ಅವರು ರಾಜಾ ಮಾರ್ಕೆಟ್‍ಗೆ ಹೋಗಿ 16,80,400 ರೂ. ಹಣ ಕೊಟ್ಟು 300 ಗ್ರಾಂ ಚಿನ್ನದ ಗಟ್ಟಿ ನೀಡಲು ತಿಳಿಸಿದ್ದಾರೆ.
ಮಾಲನ್ನು ಸಂಜೆ 7 ಗಂಟೆಗೆ ಕೊಡುವುದಾಗಿ ತಿಳಿಸಿದ್ದರಿಂದ ಅಲ್ಲಿಯೇ ಪಕ್ಕದಲ್ಲಿದ್ದ ಅಜಯ್-ವಿಜಯ್ ಎಂಬುವರ ಅಂಗಡಿಗೆ ಹೋಗಿ 39,50,000 ನಗದು ನೀಡಿ 700 ಗ್ರಾಂ ಚಿನ್ನದ ಗಟ್ಟಿ ನೀಡಲು ತಿಳಿಸಿದ್ದಾಗ ಅವರು ಸಹ ಸಂಜೆ 7 ಗಂಟೆಗೆ ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಅದೇ ರೀತಿ ಮಲ್ಲಯ್ಯ ಅವರು ರಾಜಾ ಮಾರ್ಕೆಟ್‍ನ ಬಾಪೂ ಭಾಯ್ ಅವರಿಗೆ 28.40 ಲಕ್ಷ ರೂ. ಹಣ ನೀಡಿ 500 ಗ್ರಾಂ ಚಿನ್ನದ ಗಟ್ಟಿ ನೀಡಲು ತಿಳಿಸಿದಾಗ ಅವರು ಸಹ ಮಾಲನ್ನು ಸಂಜೆ 5 ಗಂಟೆಗೆ ಕೊಡುವುದಾಗಿ ಹೇಳಿದ್ದರಿಂದ ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಮನೀಶ್ ಎಂಬುವರ ಅಂಗಡಿಗೆ ಹೋಗಿ 26.20 ಲಕ್ಷ ರೂ. ಹಣವನ್ನು ನೀಡಿ 500 ಗ್ರಾಂ ಚಿನ್ನದ ಗಟ್ಟಿ ನೀಡಲು ತಿಳಿಸಿದಾಗ ಅವರು ಸಂಜೆ 7 ಗಂಟೆಗೆ ಬಂದು ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ಇತ್ತ ಮಲ್ಲಯ್ಯ ಅವರ ಮಗ ಸುನೀಲ್ ಕುಮಾರ್ ರಾಜಾ ಮಾರ್ಕೆಟ್‍ನ ಮನೀಶ್ ಎಂಬುವರ ಬಳಿ ಹೋಗಿ 75 ಲಕ್ಷ ರೂ. ಹಣ ನೀಡಿ 1 ಕೆಜಿ 500 ಗ್ರಾಂ ಚಿನ್ನದ ಗಟ್ಟಿ ನೀಡಲು ತಿಳಿಸಿದಾಗ ಅವರು ಸಹ 7 ಗಂಟೆಗೆ ಬಂದು ತೆಗೆದುಕೊಂಡ ಹೋಗುವಂತೆ ತಿಳಿಸಿದ್ದಾರೆ.
ನಂತರ ಈ ಮೂವರು ರಾಜ ಮಾರ್ಕೆಟ್‍ನಿಂದ ಮಧ್ಯಾಹ್ನ 2.30ರ ಸುಮಾರಿಗೆ ಊಟ ಮಾಡಿಕೊಂಡು ರೂಂಗೆ ಹೋಗಿ ಪುನಃ 7 ಗಂಟೆ ಸುಮಾರಿಗೆ ಒಟ್ಟಾಗಿ ರಾಜಾ ಮಾರ್ಕೆಟ್‍ಗೆ ಬಂದು ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳನ್ನು ಪಡೆದುಕೊಂಡು ಬ್ಯಾಗ್‍ನಲ್ಲಿ ಹಾಕಿಕೊಂಡು ರಾತ್ರಿ 9.30ರ ಸುಮಾರಿಗೆ ಅವರು ತಂಗಿದ್ದ ರೂಂಗೆ ಹೋಗಿದ್ದಾರೆ.
ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ -ಅಖಿಲೇಶ್ ಯಾದವ್ ಭೇಟಿ
ರಾಯಚೂರಿಗೆ ವಾಪಸ್ ಹೋಗುವ ಸಂಬಂಧ ರೂಂ ಖಾಲಿ ಮಾಡಿ ಆನಂದ್ ರಾವ್ ಸರ್ಕಲ್ ಬಳಿ ಬಂದು ಊಟ ಮಾಡಿ, ಸುನೀಲ್ ಕುಮಾರನನ್ನು ಗ್ರೀನ್ ಲೈಟ್ ಟ್ರಾವೆಲ್ಸ್ ಕಚೇರಿಯಲ್ಲಿ ಕೂರಿಸಿ ನಂತರ ಇವರಿಬ್ಬರು ಚಿನ್ನದ ಗಟ್ಟಿ ಇದ್ದ ಬ್ಯಾಗ್‍ನ್ನು ತೆಗೆದುಕೊಂಡು ಅಲ್ಲೇ ಸಮೀಪದಲ್ಲಿದ್ದ ಶೌಚಾಲಯಕ್ಕೆ ಹೋಗುತ್ತಿದ್ದಾಗ ಇಬ್ಬರು ವಂಚಕರು ಇವರಿಬ್ಬರನ್ನು ತಡೆದು ತಾವು ಪೊಲೀಸರೆಂದು ನಟಿಸಿದ್ದಾರೆ.
ಇವರಿಬ್ಬರನ್ನು ಮಾತನಾಡಿಸುತ್ತಾ ನಿಮ್ಮನ್ನು ಮೂರು ತಿಂಗಳಿನಿಂದ ಗಮನಿಸುತ್ತಿದ್ದೇವೆ ಎಂದು ಹೇಳಿ ಅವರ ಬಳಿ ಇದ್ದ 2 ಕೆಜಿ ಚಿನ್ನದ ಗಟ್ಟಿ ಮತ್ತು 200 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್‍ಗಳನ್ನು ಕಿತ್ತುಕೊಂಡು ನಂತರ ಆಟೋದಲ್ಲಿ ಕರೆದುಕೊಂಡು ಹೋಗಿ ಮಲ್ಲಯ್ಯ ಅವರ ಬಳಿ ಇದ್ದ 19 ಸಾವಿರ ಹಣ ಕಸಿದುಕೊಂಡು ಅವರನ್ನು ರೇಸ್‍ಕೋರ್ಸ್ ಬಳಿ ಇರುವ ಕಾಂಗ್ರೆಸ್ ಕಚೇರಿ ಬಳಿ ಇಳಿಸಿದ್ದಾರೆ.
ನಂತರ ಅಬ್ದುಲ್ ರಜಾಕ್ ಅವರನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ನೆರಹೂ ತಾರಾಲಯ ಬಳಿ ಇರುವ ಚೌಡಯ್ಯ ರಸ್ತೆಯಲ್ಲಿ ಇಳಿಸಿ ಡಿಸಿ ಕಚೇರಿಗೆ ಬನ್ನಿ ಎಂದು ಹೇಳಿ ಅಲ್ಲಿಂದ ಆಟೋದಲ್ಲಿ ಖದೀಮರು ಪರಾರಿಯಾಗಿದ್ದಾರೆ.
ತಾವು ಮೋಸ ಹೋಗಿರುವುದು ಅರಿತು ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಅವರು ಮಾಲೀಕರಿಗೆ ವಿಷಯ ತಿಳಿಸಿ ನಂತರ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ತಮ್ಮ ಬಳಿ ಇದ್ದ ಒಟ್ಟು ಎರಡು ಕೆಜಿ ಚಿನ್ನದ ಗಟ್ಟಿ ಹಾಗೂ 200 ಗ್ರಾಂ ಚಿನ್ನಾಭರಣ, 19 ಸಾವಿರ ಹಣ ದೋಚಿದ್ದು, ಅವುಗಳ ಅಂದಾಜು ಬೆಲೆ ಸುಮಾರು ಒಂದು ಕೋಟಿ 12 ಲಕ್ಷ ರೂ. ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕರು ಹಾಗೂ ಮಾಲುಗಳ ಪತ್ತೆಗಾಗಿ ಕಾರ್ಯಾನ್ಮುಖರಾಗಿದ್ದಾರೆ.
fake, police, robbery, 2kg gold, jewellery, Bengaluru,