ಬೆಂಗಳೂರು,ಆ.5- ಸರ್ಕಾರ ನಿಷೇಧಿಸಿರುವ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 5.11 ಲಕ್ಷ ರೂ. ಮೌಲ್ಯದ ವಿವಿಧ ಮುಖ ಬೆಲೆಯ 2664 ನಕಲಿ ಸ್ಟಾಂಪ್ ಪೇಪರ್‍ಗಳು, ನಕಲಿ ಸೀಲ್‍ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ವೆಂಕಟೇಶ್, ವಿಶ್ವನಾಥ್, ಕಾರ್ತಿಕ್, ಶ್ಯಾಮರಾಜು, ಶಶಿಧರ್, ಕರಿಯಪ್ಪ, ರವಿಶಂಕರ್, ಶಿವಶಂಕರಪ್ಪ, ಗುಣಶೇಖರ್, ರಾಘವ ಎನ್.ಕಿಶೋರ್ ಬಂಧಿತ ಆರೋಪಿಗಳು. ಈ ವಂಚಕರು ಒಂದು ಹಳೆಯ ಸ್ಟಾಂಪ್ ಪೇಪರ್‍ನ್ನು 5 ಸಾವಿರದಿಂದ 8 ಸಾವಿರಕ್ಕೆ ಮಾರಾಟ ಮಾಡುತ್ತಿದ್ದು, ಇವರು ಒಂದು ಪೇಪರ್‍ನ್ನು 5 ಸಾವಿರ ರೂ.ಗೆ ಮಾರಾಟ ಮಾಡಿದರೂ 2664 ಪೇಪರ್‍ಗೆ ಒಟ್ಟು 1,33,20,000 ಬೆಲೆಯಾಗಿರುತ್ತದೆ.
ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾಯ ಭವನದ ಆವರಣದಲ್ಲಿರುವ ಟೈಪಿಂಗ್‍ಪೂಲ್‍ನಲ್ಲಿರುವ ಕೆಲವು ಅಂಗಡಿಗಳಲ್ಲಿ ಸರ್ಕಾರದಿಂದ ನಿಷೇಧಿಸಿರುವ ಛಾಪಾ ಕಾಗದಗಳನ್ನು, ವಿವಿಧ ಮುಖಬೆಲೆಯ ಸ್ಟಾಂಪ್ ಪೇಪರ್‍ಗಳನ್ನು ಹೆಚ್ಚಿನ ಬೆಲೆಗೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿದರು.
ತಕ್ಷಣ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಕಲಿ ಸ್ಟಾಂಪ್ ಪೇಪರ್ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 5.11 ಲಕ್ಷ ರೂ. ಮೌಲ್ಯದ ನಕಲಿ ಸ್ಟಾಂಪ್ ಪೇಪರ್‍ಗಳು, ಇವುಗಳನ್ನು ಮುದ್ರಿಸಲು ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ವಿವಿಧ ಸರ್ಕಾರಿ ಕಚೇರಿಯ ಹೆಸರಿನ ಮುದ್ರೆಗಳು ಮತ್ತು ನಕಲಿ ಸ್ಟಾಂಪ್ ಪೇಪರ್‍ಗೆ ಬಳಸುವ ವಿವಿಧ ಮುದ್ರೆಗಳಿರುವ 119 ನಕಲಿ ಸೀಲುಗಳು, ಮೊಬೈಲ್ ಫೋನ್‍ಗಳು, ಹಾರ್ಡ್ ಡಿಸ್ಕ್, ಛಾಪಾ ಕಾಗದಗಳ ಮೂಲಕ ನಕಲಿಯಾಗಿ ಸೃಷ್ಟಿಸಿದ್ದ 1990, 1995, 2002 ಹಾಗೂ 2009ನೇ ಇಸವಿಯ ನಿವೇಶನವೊಂದರ ನಕಲಿ ಜಿಪಿಎ ಪತ್ರ ಹಾಗೂ 2009ನೇ ಇಸವಿಯ ಹೆಬ್ಬೆಟ್ಟು ಪಡೆದುಕೊಂಡಿರುವ ಒಂದು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಒಂದು ಹಳೆಯ ಸ್ಟಾಂಪ್ ಪೇಪರ್‍ನ್ನು 5 ಸಾವಿರದಿಂದ 8 ಸಾವಿರಕ್ಕೆ ಮಾರಾಟ ಮಾಡುತ್ತಿದ್ದುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳು ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಸ್ಟಾಂಪ್ ಪೇಪರ್‍ಗಳನ್ನು ಅವರಿಗೆ ಬೇಕಾದ ದಿನಾಂಕ ಮತ್ತು ಬೆಲೆಗೆ ತಕ್ಕಂತೆ ನಕಲಿಯಾಗಿ ಮುದ್ರಿಸಿಕೊಂಡು ಅವುಗಳಿಗೆ ನಕಲಿ ಸೀಲುಗಳನ್ನು ಹಾಕುತ್ತಿದ್ದರು. ಹಲವಾರು ವರ್ಷಗಳ ಹಿಂದೆ ಫ್ರಾಂಕಿಂಗ್ ಪೇಪರ್‍ಗಳನ್ನು ಸೃಷ್ಟಿಸುವ ವ್ಯವಸ್ಥಿತ ಜಾಲವನ್ನು ಹೊಂದಿದ್ದರು.
ಇವರುಗಳಿಂದ ಖರೀದಿ ಮಾಡಿದ ಬ್ರೋಕರ್‍ಗಳು ಈ ಸ್ಟಾಂಪ್ ಪೇಪರ್‍ಗಳನ್ನು ಬಳಸಿ ಹಿಂದಿನ ವರ್ಷಗಳ ಅಂದರೆ ಸ್ಟಾಂಪ್ ಪೇಪರ್ ನಿಷೇಧಿಸಿದ ದಿನಾಂಕಕ್ಕೂ ಮೊದಲೇ ಇದ್ದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಆಸ್ತಿಯ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಈ ದಾಖಲೆಗಳನ್ನು ನೈಜವೆಂದು ಹಾಜರುಪಡಿಸುತ್ತಿದ್ದರು.
ವಂಚನೆ ಮಾಡುವ ಉದ್ದೇಶದಿಂದ ಆಸ್ತಿಗಳ ಫಲಾನುಭವಿಗಳಾಗಿ, ಇವುಗಳನ್ನು ನ್ಯಾಯಾಲಯಗಳಿಗೆ, ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸುವುದನ್ನು ವಾಮ ಮಾರ್ಗದ ಮೂಲಕ ಹಣ ಸಂಪಾದನೆ ಮಾಡಿ ವಂಚನೆ ಮಾಡಿರುವುದು ಪೊಲೀಸರ ತನಿಖೆಯಿಂದ ಕಂಡುಬಂದಿರುತ್ತದೆ.
ಈಗಾಗಲೇ ಈ ನಕಲಿ ಸ್ಟಾಂಪ್ ಪೇಪರ್‍ಗಳಿಂದ ಸೃಷ್ಟಿ ಮಾಡಿಕೊಂಡ ನಾಲ್ಕು ನಕಲಿ ದಾಖಲೆಗಳನ್ನು, ಇತರೆ ನಕಲಿ ಸ್ಟಾಂಪ್ ಪೇಪರ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸ್ಟಾಂಪ್ ಪೇಪರ್‍ಗಳನ್ನು ಯಾರ್ಯಾರಿಗೆ ಮಾರಾಟ ಮಾಡುತ್ತಾರೆ, ಮತ್ತು ಯಾವ ಯಾವ ನಕಲಿ ದಾಖಲೆಗಳು ಸೃಷ್ಟಿಯಾಗಿರುತ್ತದೆ ಎಂಬುವ ಬಗ್ಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಕೈಗೊಳ್ಳಲಾಗಿದೆ.