ಬೆಂಗಳೂರು, ಫೆ.22- ಪ್ರತಿಷ್ಠಿತ ಸರ್ಫ್ ಎಕ್ಸೆಲ್ ಕಂಪೆನಿಯ ಬಟ್ಟೆ ಒಗೆಯುವ ಪುಡಿಯನ್ನು ನಕಲಿಯಾಗಿ ತಯಾರು ಮಾಡಿ ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 5 ಲಕ್ಷ ರೂ. ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಬೈಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿವಿ ರಾಮನ್ ನಗರದ 1ನೆ ಕ್ರಾಸ್ ಕಗ್ಗದಾಸಪುದ ಮುನಿಯಪ್ಪ ಗೋದಾಮಿನಲ್ಲಿ ಆರೋಪಿಯು ಬಟ್ಟೆ ಒಗೆಯುವ ಪ್ರತಿಷ್ಠಿತ ಕಂಪೆನಿಯ ಪುಡಿಯನ್ನು ನಕಲಿಯಾಗಿ ತಯಾರು ಮಾಡುವ ಪ್ಯಾಕ್ಟರಿ ನಡೆಸುತ್ತಿದ್ದನು.
ಇಲ್ಲಿ ನಕಲಿ ಗೋದ್ರೇಜ್ ಗುಡ್ ನೈಟ್ ಲಿಕ್ವಿಡ್ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಗೋದಾಮು ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಸುಮಾರು 5 ಲಕ್ಷ ರೂ. ಬೆಲೆ ಬಾಳುವ ಸರ್ಫ್ ಎಕ್ಸೆಲ್ ಬಟ್ಟೆ ಒಗೆಯವ ಪುಡಿ ಹಾಗೂ ನಕಲಿ ಗೋದ್ರೇಜ್ ಗುಡ್ ನೈಟ್ ಲಿಕ್ವಿಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಈ ಪ್ಯಾಕ್ಟರಿ ನಡೆಸಲು ಯಾವುದೇ ಅನುಮತಿಯನ್ನು ಪಡೆದುಕೊಂಡಿರುವುದಿಲ್ಲ. ನಕಲಿಯಾಗಿ ವಸ್ತುಗಳನ್ನು ತಯಾಸಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
