ಆನ್‍ಲೈನ್ ಇನ್ಸುರೆನ್ಸ್ ಅಪ್ಲಿಕೇಷನ್‍ಬಳಸಿ ವಾಹನಗಳಿಗೆ ನಕಲಿ ವಿಮೆ : ಏಜೆಂಟ್ ಬಂಧನ

Social Share

ಬೆಂಗಳೂರು,ಸೆ.20- ಆನ್‍ಲೈನ್ ಇನ್ಸುರೆನ್ಸ್ ಅಪ್ಲೆಕೇಶನ್ ಬಳಸಿಕೊಂಡು 225 ಕಮರ್ಷಿಯಲ್ ವಾಹನಗಳಿಗೆ ನಕಲಿ ಇನ್ಸ್‍ರೆನ್ಸ್ ಪಾಲಿಸಿಗಳನ್ನು ಮಾಡಿಸಿ ವಂಚಿಸುತ್ತಿದ್ದ ಏಜೆಂಟ್‍ನನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಕೊ ಜನರಲ್ ಇನ್ಸ್‍ರೆನ್ಸ್ ಕಂಪೆನಿಯ ಅಪ್ಲಿಕೇಶನ್‍ನಲ್ಲಿನ ಲೋಪದೋಷಗಳನ್ನು ಅಪರಿಚಿತ ವ್ಯಕ್ತಿಗಳು ದುರ್ಬಳಕೆ ಮಾಡಿ 2ಲಕ್ಷಕ್ಕೂ ಅಧಿಕ ನಕಲಿ ಕಮರ್ಷಿಯಲ ವಾಹನಗಳನ್ನು ದೇಶಾದ್ಯಂತ ಇರುವ ವಿವಿಧ ಆರ್‍ಟಿಒಗಳಲ್ಲಿ ನೋಂದಣಿ ಮಾಡಿಸಿರುವುದಾಗಿ ವ್ಯಕ್ತಿಯೊಬ್ಬರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್‍ನ ತಾಂತ್ರಿಕ ಮಾಹಿತಿ ಆಧರಿಸಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಚರಣೆ ನಡೆಸಿ ಧಾರವಾಡ ಮೂಲದ ಇರ್ಫಾನ್ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯು ಆಕೊ ಜನರಲ್ ಇನ್ಸುರೆನ್ಸ್ ಕಂಪೆನಿಯ ಅಪ್ಲೆಕೇಶನಲ್ಲಿ ತನ್ನ ಮೊಬೈಲ್ ನಂಬರ್, ಇ-ಮೇಲ್ ಐಡಿ, ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಕೊಂಡು 14 ಸಾವಿರ ರೂ. ಪಾವತಿ ಮಾಡಬೇಕಾದ ಇನ್ಸುರೆನ್ಸ್‍ಗೆ ಕ್ಲಾಸ್ ಆಫ್ ವೆಹಿಕಲ್‍ನನ್ನು ಬದಲಾಯಿಸಿದ್ದನು.

ತನ್ನ ಮನಸ್ಸಿಗೆ ಬಂದಂತೆ ಬೇರೆ ಬೇರೆ ವ್ಯಕ್ತಿಗಳ ಹೆಸರು ಮತ್ತು ವಾಹನಗಳ ಮಾಡೆಲ್‍ಗಳನ್ನು ಟಿವಿಎಸ್, ಟಿವಿಎಸ್ 15, ಸ್ಕೂಟಿ, ಚಾಂಪ್, ಎಕ್ಸ್‍ಎಲ್ ಸೂಪರ್ ಎಂದು ನಮೂದಿಸಿ ಇನ್ಸುರೆನ್ಸನ್ನು ನವೀಕರಣ ಮಾಡಿ 500ರಿಂದ 700ರೂ.ಗಳನ್ನು ಪಾವತಿ ಮಾಡುತ್ತಿದ್ದನು.

ಪ್ರತಿ ವಾಹನಕ್ಕೆ 300ರೂ. ಕಮಿಷನ್ ಪಡೆದುಕೊಂಡು ವಂಚಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುತ್ತಾ ತನ್ನ ಮೋಜಿನ ಜೀವನಕ್ಕೆ ಬಳಕೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಇದೇ ರೀತಿ ಆನ್‍ಲೈನ್ ಇನ್ಸುರೆನ್ಸ್ ಅಪ್ಲಿಕೇಶನ್ ಮುಖಾಂತರ ದೇಶಾದ್ಯಂತ ಸುಮಾರು 2ಲಕ್ಷಕ್ಕೂ ಹೆಚ್ಚಿನ ವಾಹನಗಳ ನಕಲಿ ಇನ್ಸುರೆನ್ಸ್‍ಗಳನ್ನು ಮಾಡಿ ವಂಚಿಸಿರುವ ಮಾಹಿತಿ ಲಭ್ಯವಾಗಿದ್ದು, ಈ ವಾಹನಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಸಾರ್ವಜನಿಕರಿಗೆ ಸೂಚನೆ: ಇನ್ಸುರೆನ್ಸ್ ಏಜೆಂಟರ್‍ಗಳಿಂದ ತಮ್ಮ ವಾಹನಗಳಿಗೆ ಇನ್ಸುರೆನ್ಸ್ ಮಾಡಿಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸದಿದ್ದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಎಂಬ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬ ಅವರ ಮಾರ್ಗದರ್ಶನದಲ್ಲಿ ಎಸಿಪಿ ಲಕ್ಷ್ಮೀನಾರಾಯಣ್ ಸಲಹೆ ಮೇರೆಗೆ ಇನ್ಸ್‍ಪೆಕ್ಟರ್ ಯೋಗೇಶ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತದೆ.

Articles You Might Like

Share This Article