ಯಾದಗಿರಿ, ಆ.5- ಮಗುವಿನ ಮುಡಿ ತೆಗೆಸಿಕೊಂಡು ವಾಪಸ್ ಬರುವಾಗ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆ ಮಗು ಸೇರಿ ರಾಯಚೂರಿನ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಅರಕೇರಾ (ಕೆ) ಬಳಿ ತಡರಾತ್ರಿ ಸಂಭವಿಸಿದೆ.
ಮೊಹಮ್ಮದ್ ಮಜರ್ ಹುಸೇನ್ (79) , ನೂರ್‍ಜಹಾನ್ ಬೇಗಂ (70), ಮಹಮ್ಮದ್ ವಾಜಿದ್ ಹುಸೇನ್ (39), ಹೀನಾ ಬೇಗಂ (30), ಇಮ್ರಾನ್ (22) ಮತ್ತು ಉಮೇಜಾ (6 ತಿಂಗಳ ಹಸುಗೂಸು) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಬಾಲಕ ಮಹಮ್ಮದ್ ಫಾಜಿಲ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತರೆಲ್ಲರೂ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ತೆಲಂಗಾಣದ ಕೊಡಂಗಲ್ ಸಮೀಪದ ಚಿತ್ಲಾಪಲ್ಲಿಯ ಹಜರತ್ ಅಬ್ದುಲ್ ಷಾ ದರ್ಗಾಕ್ಕೆ ತೆರಳಿ ಮಗುವಿನ ಮುಡಿ ತೆಗೆಸುವ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುವಾಗ ಅರಕೆರ ಬಳಿ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೂವರು ಸಾವನ್ನಪ್ಪಿದ್ದಾರೆ.
ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಇನ್ಸ್‍ಪೆಕ್ಟರ್ ದೌಲತ್ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುಮಿಟ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದರು.
ನಿನ್ನೆಯಷ್ಟೆ ಮಗುವಿನ ಮುಡಿ ತೆಗೆಸಲು ದರ್ಗಾಕ್ಕೆ ತೆರಳಿದ್ದ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಸುದ್ದಿ ತಿಳಿದು ಹಟ್ಟಿ ಗ್ರಾಮದಲ್ಲಿ ಸಂಬಂಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿತ್ತು.