ಪ್ರಿಯಕರನೊಂದಿಗೆ ಮಗಳು ಪರಾರಿ, ಮನನೊಂದು ಆತ್ಮಹತ್ಯೆಗೆ ಶರಣಾದ ಕುಟುಂಬ

Social Share

ಶಿಡ್ಲಘಟ್ಟ, ಅ.4- ಪ್ರೀತಿಸಿದ ಯುವಕನೊಂದಿಗೆ ಮಗಳು ಮನೆಬಿಟ್ಟು ಹೋಗಿದ್ದರಿಂದ ಮನನೊಂದು ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಶ್ರೀರಾಮಪ್ಪ (63), ಸರೋಜಮ್ಮ (58), ಇವರ ಪುತ್ರ ಮನೋಜ್ (24) ಆತ್ಮಹತ್ಯೆಗೆ ಶರಣಾದವರು.ಹಂಡಿಗನಾಳದಲ್ಲಿ ಶ್ರೀರಾಮಪ್ಪ ದಂಪತಿ ತಮ್ಮ ಮೂವರು ಮಕ್ಕಳಾದ ಅರ್ಚನಾ, ಮನೋಜ್, ರಂಜಿತ್ ಜತೆ ಜೀವನ ನಡೆಸುತ್ತಿದ್ದರು. ಗ್ರಾಮದಲ್ಲಿ ಈ ಕುಟುಂಬಕ್ಕೆ ಒಳ್ಳೆಯ ಗೌರವವಿದೆ.

ಮಗಳು ಅರ್ಚನಾಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದು, ಎಂಎಸ್‍ಸಿ ವ್ಯಾಸಂಗ ಮಾಡಿದ್ದಾರೆ. ಮಗಳಿಗೆ ಉತ್ತಮ ವರನನ್ನು ನೋಡಿ ಮದುವೆಗೆ ಸಿದ್ಧತೆ ಸಹ ನಡೆಸುತ್ತಿದ್ದರು.ಈ ನಡುವೆ ಅರ್ಚನಾಳಿಗೆ ಸ್ವಗ್ರಾಮದ ಯುವಕ ನಾರಾಯಣಸ್ವಾಮಿ ಪರಿಚಯವಾಗಿ, ಸ್ನೇಹಕ್ಕೆ ತಿರುಗಿ ತದನಂತರ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದಾರೆ.

ನಾರಾಯಣಸ್ವಾಮಿ ಬೆಂಗಳೂರಿನ ಏರ್ ಪೋರ್ಟ್ ನ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರ ವಿಚಾರ ಅರ್ಚನಾ ಮನೆಯವರಿಗೆ ತಿಳಿದು ಆಕೆಗೆ ಬುದ್ಧಿವಾದ ಸಹ ಹೇಳಿದ್ದರು.ಮಗಳ ಪ್ರೇಮ ವಿಚಾರವಾಗಿ ಹಲವಾರು ಬಾರಿ ಮನೆಯಲ್ಲಿ ಜಗಳವೂ ನಡೆದು ಆತನಿಂದ ದೂರವಿರುವಂತೆ ಅರ್ಚನಾಳಿಗೆ ತಿಳಿ ಹೇಳಿದ್ದಾರೆ.ಈ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆ ಪೆರೇಸಂದ್ರ ಸಮೀಪದ ಗ್ರಾಮವೊಂದರ ಯುವಕನೊಂದಿಗೆ ತಮ್ಮ ಮಗಳು ಅರ್ಚನಾಳಿಗೆ ಮದುವೆ ನಿಶ್ಚಯ ಮಾಡಿದ್ದು, ನಾಳೆ ಇವರಿಬ್ಬರ ನಿಶ್ಚಿತಾರ್ಥಕ್ಕೆ ಏರ್ಪಾಡು ಸಹ ಮಾಲಾಗಿತ್ತು.

ಆದರೆ, ಪೋಷಕರು ನೋಡಿದ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮನಸ್ಸಾಗದೆ ಮೊನ್ನೆ ರಾತ್ರಿ ಅರ್ಚನಾ ಮನೆ ಬಿಟ್ಟು ಹೋಗಿದ್ದಾರೆ.ಈ ವಿಷಯದಿಂದ ಒಂದು ರೀತಿ ಆಘಾತಕ್ಕೊಳಗಾದ ಪೋಷಕರು ಹಾಗೂ ಇಬ್ಬರು ಸಹೋದರರು ಅರ್ಚನಾಳನ್ನು ಹುಡುಕಿದ್ದಾರೆ. ಆದರೆ, ಆಕೆ ತಾನು ಪ್ರೀತಿಸಿದ ಯುವಕನೊಂದಿಗೆ ಹೋಗಿರುವ ವಿಷಯ ತಿಳಿದು ಕಣ್ಣೀರು ಹಾಕಿದ್ದಾರೆ.

ತಮ್ಮ ಮಗಳ ವರ್ತನೆಯಿಂದ ಮನನೊಂದ ಪೋಷಕರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.ರಾತ್ರಿ ಇಬ್ಬರು ಗಂಡುಮಕ್ಕಳೊಂದಿಗೆ ದಂಪತಿ ಊಟ ಮಾಡಿದ್ದಾರೆ. ನಂತರ ಹಿರಿಯ ಮಗ ರಂಜಿತ್ ರೂಮ್‍ಗೆ ಹೋಗಿ ಮಲಗಿಕೊಂಡಿದ್ದಾನೆ. ಮನೆಯ ಹಾಲ್‍ನಲ್ಲಿದ್ದ ದಂಪತಿ ಸಾಯಲು ನಿರ್ಧರಿಸಿ ರಂಜಿತ್‍ನನ್ನು ಎಬ್ಬಿಸುವುದು ಬೇಡವೆಂದು ತೀರ್ಮಾನಿಸಿದ್ದಾರೆ.

ತಡರಾತ್ರಿ ತಮ್ಮ ಕಿರಿಯ ಪುತ್ರ ಮನೋಜ್‍ನೊಂದಿಗೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಂದು ಬೆಳಗ್ಗೆ ರಂಜಿತ್ ಎದ್ದು ರೂಮ್‍ನಿಂದ ಹೊರಗೆ ಬಂದಾಗ ಅಪ್ಪ-ಅಮ್ಮ ಮತ್ತು ಸಹೋದರ ಹಾಲ್‍ನಲ್ಲಿ ಸಾವನ್ನಪ್ಪಿರುವುದು ಕಂಡು ಕಿರುಚಿಕೊಂಡಿದ್ದಾರೆ.ನೆರೆಹೊರೆಯವರು ಏನಾಯಿತೆಂದು ಗಾಬರಿಯಾಗಿ ಇವರ ಮನೆ ಬಳಿ ಬಂದು ನೋಡಿದಾಗ ಮೂವರು ಸಾವನ್ನಪ್ಪಿರುವುದು ಕಂಡು ಮಮ್ಮಲ ಮರುಗಿದರು. ಈ ವಿಷಯ ಗ್ರಾಮದವರಿಗೆ ತಿಳಿದು ಇಡೀ ಗ್ರಾಮಸ್ಥರು ಇವರ ಮನೆ ಬಳಿ ಜಮಾಯಿಸಿದ್ದರು.

ವಿಷಯ ತಿಳಿದು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article