ಅವಕಾಶಗಳ ನಿರೀಕ್ಷೆಯಲ್ಲಿ ಪವಿತ್ರ ರಾಮಯ್ಯ

Social Share

ಬೆಂಗಳೂರು,ಡಿ.12- ಸುಮಾರು 30 ವರ್ಷಗಳ ಕಾಲ ರೈತ ಹೋರಾಟದಲ್ಲಿ ಗುರುತಿಸಿಕೊಂಡು ಜನಪರ ನಿಲುವುಗಳು ಮತ್ತು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕೆ.ವಿ.ಪವಿತ್ರ ರಾಮಯ್ಯ ಅವರು ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ಭದ್ರಾ ಕಾಡ ಅಧ್ಯಕ್ಷರಾಗಿ 2020ರ ಜೂನ್ 23ರಿಂದ ಒಂದು ವರ್ಷ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಅವರು ಭದ್ರ ನಾಲೆಯ ಕೊನೆಯ ಹಂತದವರೆಗೂ ನೀರು ತಲುಪಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಈ ಹಿಂದೆ ರೈತ ಹೋರಾಟಗಳ ವೇಳೆ ಪವಿತ್ರ ರಾಮಯ್ಯ ಅವರು ಭದ್ರಾ ನಾಲೆ ನೀರಾವರಿ ವ್ಯವಸ್ಥೆ ಅರ್ಧಕ್ಕೆ ನಿಂತು ಹೋಗಿರುವುದನ್ನು ಟೀಕಿಸುತ್ತಿದ್ದರು.

ರೈತ ಸಂಘದ ಪ್ರೊ.ಎಂ.ಡಿ.ನಂಜುಂಡಿ ಸ್ವಾಮಿ, ಎನ್.ಡಿ.ಸುರೇಶ್, ಮಾಜಿ ಸಚಿವ ಎಚ್.ಎಸ್.ರುದ್ರಪ್ಪ ಅವರ ಹೋರಾಟಗಳಿಂದ ಪ್ರೇರಣೆ ಪಡೆದು 22ನೇ ವಯಸ್ಸಿಗೆ ಪವಿತ್ರ ರಾಮಯ್ಯ ಕುಟುಂಬದ ಬೆಂಬಲದೊಂದಿಗೆ ರೈತ ಸಂಘದ ಸಕ್ರಿಯ ಸದಸ್ಯರಾಗಿ ಸಾರ್ವಜನಿಕ ಜೀವನ ಆರಂಭಿಸಿದರು.

ನಿರಂತರ ಹೋರಾಟಗಳ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಜೊತೆಗೆ ರೈತರ ಬೆನ್ನೆಲುಬಾಗಿ ನಿಂತರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರು ಪವಿತ್ರ ರಾಮಯ್ಯ ಅವರನ್ನು ಭದ್ರಾ ಕಾಡ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದರು.

ಈ ಹಿಂದೆ ಭದ್ರಾ ವಿಷಯವಾಗಿ ಸರಣಿ ಹೋರಾಟಗಳನ್ನು ನಡೆಸಿ ಸಮಸ್ಯೆ ಅರಿತಿದ್ದ ಪವಿತ್ರ ರಾಮಯ್ಯ ಅಧಿಕಾರ ಸಿಕ್ಕಾಗ ಕಾಲಹರಣ ಮಾಡದೆ ರೈತರ ನೆರವಿಗೆ ಧಾವಿಸಿದರು. ಕೋವಿಡ್ ಸಂಕಷ್ಟದಲ್ಲಿ ಹಣಕಾಸು ಮುಗ್ಗಟ್ಟು ಎದುರಾದ ವೇಳೆಯಲ್ಲೂ ಹಿಂದಡಿ ಇಡದೆ ರೈತರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಾಮೂಹಿಕ ಪ್ರಯತ್ನದ ಮೂಲಕ ನಾಲಾ ಸ್ವಚ್ಚತಾ ಅಭಿಯಾನ ನಡೆಸಿದರು.

ಬಿಜೆಪಿ ಚುನಾವಣ ರಣತಂತ್ರ: ಮೋದಿ ರ‍್ಯಾಲಿಗಳಿಗೆ ಸಿದ್ಧತೆ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ನಾಲೆ ಆಧುನೀಕರಣ ಮತ್ತು ಹೂಳು ತೆಗೆಯುವ ಕೆಲಸಗಳಿಗೆ ಬಳಸಿಕೊಳ್ಳುವ ಪ್ರಯೋಗ ಮಾಡಿದರು. ಇದಕ್ಕೆ ಆಡಳಿತ ವ್ಯವಸ್ಥೆಯ ಬೆಂಬಲ ದೊರಕಿದ್ದರಿಂದ ಯಶಸ್ವಿಯಾಗಿ ಮಲೆಬೆನ್ನೂರು ಭಾಗದ ಕೊನೆಯ ಹಂತದವರೆಗೂ ನೀರು ತಲುಪಿದೆ.

ಎರಡನೇ ಅವಧಿಗೆ ಕಾಡಾ ಅಧ್ಯಕ್ಷರಾಗಿ ಮುಂದುವರೆದಿರುವ ಅವರು ಕೆಆರ್‍ಎಸ್ ಮಾದರಿಯಲ್ಲಿ ಭದ್ರಾ ಜಲಾಶಯವನ್ನು ಅಭಿವೃದ್ಧಿಪಡಿಸುವುದು, ಗೋಂದಿ ಅಣೆಕಟ್ಟು ಸ್ಥಳವನ್ನು ಪ್ರವಾಸೋದ್ಯಮವನ್ನಾಗಿ ಉನ್ನತೀಕರಿಸಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಯೋಜನೆ ಹೊಂದಿದ್ದಾರೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗೆ ನಮ್ಮ ಗ್ರಾಮ-ನಮ್ಮ ಕೆರೆ ಕಾರ್ಯಕ್ರಮದಲ್ಲಿ ಕಾಡಾ ವ್ಯಾಪ್ತಿಯ ಕೆರೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಪ್ರತಿ ಹಂತದಲ್ಲೂ ಹಿರಿಯರ ಆದರ್ಶ, ಸಲಹೆಸೂಚನೆಗಳೊಂದಿಗೆ ಮುಂದಡಿ ಇಡುತ್ತಿರುವ ಪವಿತ್ರ ರಾಮಯ್ಯ, ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ, ಕೇಂದ್ರ ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಗಡಿ ವಿವಾದ: ಏಕಪಕ್ಷೀಯ ನಿರ್ಧಾರ ಬೇಡ ಕೇಂದ್ರಕ್ಕೆ ಸಂಸದರ ನಿಯೋಗ ಆಗ್ರಹ

ಕಾಡಾ ಸಂಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸಿರುವ ಪವಿತ್ರ ರಾಮಯ್ಯ ಶಾಸಕರಾಗಿ ಜನಪರ ಮಾದರಿ ಕಾರ್ಯಕ್ರಮಗಳನ್ನು ಅನುಸರಣೆ ಮಾಡುವ ಇರಾದೆ ಹೊಂದಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನಮಗೆ ಅವಕಾಶ ನೀಡಿದ್ದೇ ಆದರೆ ಉಕ್ಕಿನ ನಗರಿ ಭದ್ರಾವತಿಯಿಂದ ಕಣಕ್ಕಿಳಿಯುವ ಅಭಿಲಾಷೆ ಹೊಂದಿದ್ದಾರೆ.

ಶಾಸಕರೆಂದರೆ ಆಡಳಿತಗಾರ ಅಲ್ಲ ಜನಸೇವಕ. ನಿರುದ್ಯೋಗಿಗಳನ್ನು ಗ್ರಾಮಪಂಚಾಯ್ತಿಗೊಬ್ಬರಂತೆ ನೇಮಿಸಿಕೊಂಡು ಆಯಾ ಭಾಗಗಳಿಗೆ ತಲುಪಬೇಕಾದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದು, ಶಾಸಕರ ಕಚೇರಿಗಳನ್ನು ಜನಸಾಮಾನ್ಯರಿಗೆ ಸದಾ ಮುಕ್ತವಾಗಿಡುವಂತಹ ಚಿಂತನೆಗಳ ಮೂಲಕ ಮಾದರಿ ಆಡಳಿತ ಎಂದರೆ ಏನು ಎಂದು ಸಾಬೀತುಪಡಿಸುವ ಉತ್ಸಾಹದಲ್ಲಿದ್ದಾರೆ.

ಮತ್ತೆ ಮುನ್ನಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ : 6 ಮಂದಿಗೆ ಕೋಕ್ ?

ಭದ್ರಾವತಿಗೆ ಬಿಜೆಪಿಯಿಂದ ಟಿಕೆಟ್ ನೀಡಿದ್ದೇ ಆದರೆ ತಮ್ಮ ಗೆಲುವು ಖಚಿತ. ಈಗಾಗಲೇ ಸ್ಥಳೀಯರು ಹಲವು ಬಾರಿ ತಮ್ಮ ಜೊತೆ ಚರ್ಚೆ ನಡೆಸಿದ್ದು, ಚುನಾವಣೆಗೆ ಸ್ರ್ಪಧಿಸುವಂತೆ ಒತ್ತಡ ಹೇರಿದ್ದಾರೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ತಾನು ಬದ್ದ ಎಂದು ಪವಿತ್ರ ರಾಮಯ್ಯ ಸ್ಪಷ್ಟಪಡಿಸಿದ್ದಾರೆ.

farmer, Pavitra Ramaiah, CADA President,

Articles You Might Like

Share This Article