ಮೈಸೂರು,ಜ.3- ರಾಜ್ಯದ ಹಿತಕ್ಕೋಸ್ಕರ, ಜನರ ಕುಡಿಯುವ ನೀರಿಗೋಸ್ಕರ, ಕಾವೇರಿ ಜಲಾನಯನ ಪ್ರದೇಶದ ರೈತರಿಗಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಇಂದು ಮುಂಜಾನೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಭಕಾರ್ಯ ನಡೆಸುವ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ.
ಮೇಕೆದಾಟು ಪಾದಯಾತ್ರೆಗೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದೇವೆ ಎಂದರು. ಮೈಸೂರು ಜಿಲ್ಲೆ, ಚಾಮರಾಜನಗರ ಕೂಡ ಮೈಸೂರು ಜಿಲ್ಲೆಯ ಒಂದು ಭಾಗ. ಬೆಂಗಳೂರು ಜಿಲ್ಲೆ, ರಾಮನಗರ ಜಿಲ್ಲೆ ಅದೂ ಒಂದು ಭಾಗ. ಮೇಕೆದಾಟು ಒಂದು ಗಡಿ ಮೈಸೂರು ಜಿಲ್ಲೆ, ಇನ್ನೊಂದು ಗಡಿ ಬೆಂಗಳೂರು ಜಿಲ್ಲೆ.
ಇವೆರಡು ಜಿಲ್ಲೆಯ ಮಧ್ಯದಲ್ಲಿ ಕಾವೇರಿ ತಾಯಿ ಹರಿಯುತ್ತಿದ್ದಾಳೆ. ಅದಕ್ಕೆ ವಿಶೇಷವಾದ ಗಮನ ಎಂದರು. ಇದು ಮೈಸೂರು ಜಿಲ್ಲೆಯ ಜನತೆ ಹಕ್ಕು. ಬೆಂಗಳೂರು ಜಿಲ್ಲೆಯ ಜನತೆಯ ಹಕ್ಕು. ಮೈಸೂರು-ಬೆಂಗಳೂರು ಸೇರಿರುವ ಸಂಗಮ ಸ್ಥಳವೇ ಮೇಕೆದಾಟು ಕನಕಪುರದ ಎಡಭಾಗ. ಮೈಸೂರು ಬಲಭಾಗ. ಈಗೆಲ್ಲ ಹೊಸದಾಗಿ ರಾಮನಗರ, ಚಾಮರಾಜನಗರ ಅಂತ ಹೆಸರಿಟ್ಟುಕೊಂಡಿದ್ದೇವೆ ಅದು ಬೇರೆ ವಿಷಯ. ಇವೆರಡು ಸೇರಿ ಮೇಕೆದಾಟು ಎಂದು ತಿಳಿಸಿದರು.
ಕೊರೋನಾ ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಪಾದಯಾತ್ರೆ ಎಷ್ಟು ಸರಿ ಎಂದು ಪ್ರಶ್ನಿಸಿದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ವಾಜಪೇಯಿಯವರ ಅವಧಿಯಲ್ಲಿ ಅಡ್ವಾನಿಯವರು ರಥಯಾತ್ರೆ ಮಾಡಿದರು ಅದನ್ನು ಏನಂತ ಕರೆದಿರಿ? ಹಿಂದೆ ಬೇಕಾದಷ್ಟು ಯಾತ್ರೆಗಳನ್ನು ದೇವೇಗೌಡರು ಮಾಡಿದರು.
ಕುಣಿಗಲ್ ನಿಂದ ಬೇರೆ ಬೇರೆ ಕಡೆಯಿಂದ ಮಾಡಿದರು ಅದನ್ನು ಏನಂತ ಕರೆದಿರಿ? ಕುಮಾರಸ್ವಾಮಿಯವರು ಇಡೀ ರಾಜ್ಯಕ್ಕೆ ಓಡಾಡುತ್ತೇವೆ ಅಂತೆಲ್ಲ ಹೇಳಿದರು ಅದಕ್ಕೆ ಏನಂತ ಕರೆತೀರಿ? ಯಡಿಯೂರಪ್ಪನವರು ಐದು ಭಾಗ ಮಾಡಿ ಐದು ಮಂದಿ ಮಂತ್ರಿಗಳು ಮೊನ್ನೆ ತಾನೇ ಮಂತ್ರಿಯಾದ ತಕ್ಷಣ ಓಡಾಟ ನಡೆಸಿದರು. ಆಗೆಲ್ಲ ಕೊರೋನಾ ಇರಲಿಲ್ಲವೋ? ಚುನಾವಣಾ ಸಮಯದಲ್ಲಿ ಕೊರೋನಾ ಇರಲಿಲ್ಲವೋ? ಎಂದು ಪ್ರಶ್ನಿಸಿದ ಅವರು ಅದಕ್ಕೆ ಏನಂತ ಕರೆಯುತ್ತೀರಿ, ಅದೆಲ್ಲ ನಿಮಗೆ ಬಿಟ್ಟಿದ್ದು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮತ್ತಿತರರು ಜತೆಗಿದ್ದರು.
