ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದ ರೈತನ ಆತ್ಮಹತ್ಯೆಗೆ ಪರಿಹಾರ ನೀಡಲ್ಲ

Spread the love

ಬೆಂಗಳೂರು,ಜು.9- ಸರ್ಕಾರದ ಪರವಾನಗಿ ಇಲ್ಲದ ಲೇವಾದೇವಿದಾರರು ಹಾಗೂ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಹೊರೆಗೆ ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಯಾದಗಿರಿ ಜಿಲ್ಲೆಯ ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ವಿಚಾರಣೆ ನಡೆದಿದ್ದ ವೇಳೆ ಖಾಸಗಿ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಇದರಂತೆ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಹೇಳಿರುವ ರಾಜ್ಯ ಸರ್ಕಾರ ಇದಕ್ಕಾಗಿ ಷರತ್ತುಗಳನ್ನು ವಿಧಿಸಿದೆ.

ಸರ್ಕಾರದಿಂದ ಅಧಿಕೃತವಾಗಿ ಪರವಾನಗಿ ಹೊಂದಿದ ಖಾಸಗಿ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳು ಮತ್ತು ಚಿಟ್ ಫಂಡ್‍ಗಳಿಂದ ಪಡೆದುಕೊಂಡ ಸಾಲದ ಹೊರೆಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅಂತಹ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಪರವಾನಗಿ ಇಲ್ಲದವರಿಂದ ಸಾಲ ಪಡೆದಿದ್ದರೆ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದೆ.

Facebook Comments