ಬೆಂಗಳೂರು,ಆ.21- ಎಲ್ಲಾ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ತರಬೇಕು, ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಾಳೆ ದೆಹಲಿಯ ಜಂತರ್‍ಮಂತರ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ, ತಮಿಳುನಾಡು ಕೇರಳ ರಾಜ್ಯಗಳಿಂದ ನೂರಾರು ರೈತರು ದೆಹಲಿಯ ಸೇರಿದ್ದಾರೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2022ರ ವಿದ್ಯುತ್ ಕಾಯ್ದೆ ಖಾಸಗಿಕರಣ ತಿದ್ದುಪಡಿ ಕೈಬಿಡಬೇಕು, ಕಬ್ಬಿನ ಎಫ್ ಆರ್ ಪಿ ದರ ಪುನರ್ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ಕೃಷಿ ಉತ್ಪನ್ನಗಳ ಹಾಗೂ ಉಪಕರಣಗಳ ಮೇಲಿನ ಜಿಎಸ್ಟಿ ರದ್ದುಪಡಿಸಬೇಕು ಎಂದು ರ್ಯಾಲಿಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದಿದ್ದಾರೆ.
ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕರೋನ ಲಾಕ್‍ಡೌನ್ ಸಂಕಷ್ಟದಿಂದ ನಲುಗಿದ್ದಾರೆ. ಆದಕಾರಣ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ, ರೈತರ ಸಾಲ ಮನ್ನಾ ಮಾಡ ಬೇಕಿದೆ ಎಂದು ಹೇಳಿದ್ದಾರೆ.
ಫಸಲ್ ಭೀಮಾ ಬೆಳೆವಿಮೆ ಯೋಜನೆ ಮಾನದಂಡ ಬದಲಾಯಿಸ ಬೇಕು, ವಿಶ್ವವ್ಯಾಪಾರ ಒಪ್ಪಂದ ಡಬ್ಲ್ಯುಟಿಒ ನಿಂದ ಭಾರತ ಸರ್ಕಾರ ಹೊರಬರಬೇಕು, ಲಕ್ಷ್ಮಿಪುರ ಕೇರಿ ಪ್ರಕರಣದಲ್ಲಿ ಭಾಗಿಯಾಗಿರುವ ಕೇಂದ್ರದ ರಾಜ್ಯ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾ ಸಂಪುಟದಿಂದ ಕೈಬಿಡಬೇಕು, ದೆಹಲಿ ಹೋರಾಟದಲ್ಲಿ ಮಾಡಿದ 750 ರೈತ ಕುಟುಂಬಗಳಿಗ ಕೇಂದ್ರ ಸರ್ಕಾರ ನವಂಬರ್ ತಿಂಗಳಲ್ಲಿ ಮೂರು ಕೃಷಿ ಕಾಯ್ದೆ ರದ್ದು ಮಾಡಿದಾಗ ನೀಡಿದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.