ರೈತರು-ವರ್ತಕರೇ ಟಾರ್ಗೆಟ್; ಮೂವರು ದರೋಡೆಕೋರರ ಸೆರೆ

Social Share

ಬೆಂಗಳೂರು,ಜ.4-ರೈತರು ಮತ್ತು ವರ್ತಕರನ್ನೆ ಗುರಿಯಾಗಿರಿಸಿಕೊಂಡು ನೆಲಮಂಗಲ ಸುತ್ತಮುತ್ತಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ದರೋಡೆ ಮಾಡುತ್ತಿದ್ದ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಜಾನ್ಸನ್, ರಾಜ ಮತ್ತು ಸತ್ಯವೇಲು ಬಂತ ಆರೋಪಿಗಳು. ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಬಂಧನ ಕಾರ್ಯ ಮುಂದುವರೆದಿದೆ.
ಮುಂಜಾನೆ 1ಗಂಟೆಯಿಂದ 3 ಗಂಟೆ ಮಧ್ಯೆ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರು ಹಾಗೂ ವರ್ತಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಆಭರಣ ಹಾಗೂ ಹಣ ದೋಚಿ ದರೋಡೆಕೋರರು ಪರಾರಿಯಾಗುತ್ತಿದ್ದರು.
ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ನೆಲಮಂಗಲ ಮತ್ತು ಸುತ್ತಮುತ್ತಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕಾರ್ಯಾಚರಣೆ ಕೈಗೊಂಡು ಪಿಳ್ಳಳ್ಳಿ ಮಾರ್ಕೆಟ್‍ನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಮೂವರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ದರೋಡೆಕೋರರಿಂದ ಕೃತ್ಯಕ್ಕೆ ಬಳಸಿದ್ದ ಆಟೋ, ಚಾಕು, ದೊಣ್ಣೆ, ಮಚ್ಚು, ಖಾರದಪುಡಿ ಪೊಟ್ಟಣವನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Articles You Might Like

Share This Article