ದಾವಣಗೆರೆ, ಜ.1- ರಾತ್ರಿ ಕಪ್ರ್ಯೂ ನಡುವೆಯೇ ಜಿಲ್ಲಾಯಲ್ಲಿ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಕೊರೊನಾ ಕಾರಣ ಡಿಜೆ ಸೌಂಡ್ ಅಬ್ಬರ, ವೇದಿಕೆ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಜಿಲ್ಲಾಯ ಹೋಟೆಲ್‍ಗಳು, ಬಾರ್ ಮತ್ತು ರೆಸ್ಟೋರಂಟ್‍ಗಳು , ರೆಸಾರ್ಟ್‍ಗಳು, ಕ್ಲಬ್‍ಗಳು ಜನರಿಲ್ಲದೆ ಬಣಗುಡುತ್ತಿದ್ದವು.
ಆದರೆ, ಪಾರ್ಸಲ್‍ಗಳ ವ್ಯಾಪಾರ ಜೋರಾಗಿತ್ತು. ನಾನ್‍ವೆಜ್ ಹೊಟೇಲ್‍ಗಳಲ್ಲಿ ವ್ಯಾಪಾರ ಇನ್ನಷ್ಟು ಹೆಚ್ಚಾಗಿತ್ತು. ಬಹುತೇಕ ಮಂದಿ ಮನೆ ಮುಂದೆ ತೋಟದ ಮನೆ, ಜಮೀನುಗಳಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಆಚರಿಸಿದರು.
ಪೊಲೀಸರು ರಾತ್ರಿ 8 ಗಂಟೆಯಿಂದಲೇ ಧ್ವನಿವರ್ಧಕಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು . ರಾತ್ರಿ 10 ಗಂಟೆಗೂ ಮುನ್ನ ಮನೆಗೆ ಹೋಗಬೇಕು ಎಂದು ಸೂಚಿಸಿದರು. ರಾತ್ರಿ 10ರ ನಂತರ ಸೈರನ್ ಮೂಲಕ ಮತ್ತೊಮ್ಮೆ ಎಚ್ಚರಿಸಿದರು.ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗಿ ರಾತ್ರಿ ಕಫ್ರ್ಯೂ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದ್ದರು.
ಬೆಳಿಗ್ಗೆಯಿಂದಲೇ ತಯಾರಿ: ಹೊಸ ವರ್ಷದ ನಿಮಿತ್ತ ವಿವಿಧ ಸ್ಪೇಷನರಿ, ಫ್ಯಾನ್ಸಿ ಸ್ಟೋರ್, ಆಟಿಕೆ ಅಂಗಡಿಗಳಲ್ಲಿ ಹೊಸ ವರ್ಷದ ಶುಭಾಶಯ ಕೋರುವ ಬೋರ್ಡ್‍ಗಳು ರಾರಾಜಿಸಿದವು . ವರ್ಷದ ಕಡೆಯ ದಿನವಾಗಿದ್ದ ಬೇಕರಿ, ವೈನ್‍ಶಾಪ್, ಮಾಂಸದ ಅಂಗಡಿಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು.
ಇಲ್ಲಿನ ಅಹಾರ-2000 ಹಾಗೂ ಕೇಕ್ ವಲ್ರ್ಡ್ ಸೇರಿ ಹಲವು ಬೇಕರಿಗಳಲ್ಲಿ ವಿವಿಧ ಬಗೆಯ ಕೇಕ್‍ಗಳು ಗಮನ ಸೆಳೆದವು. ಬೇಕರಿಗಳು ವಿದ್ಯುತ್‍ನಿಂದ ಕಂಗೊಳಿಸಿದವು. ಬೇಕರಿಗಳು ರಾತ್ರಿ 10 ಗಂಟೆವರೆಗೂ ತೆರೆದಿದ್ದವು . ಕೆಲವು ಬೇಕರಿಗಳು ರಾತ್ರಿ 10.30 ರವರೆಗೂ ತೆರೆದಿದ್ದವು .
ಡಾಲ್, ಛೋಟಾ ಭೀಮ್, ಮಿಕ್ಕಿಮಸ್, ಲಾರಿ, ಕಾರು, ಟ್ರಕ್ ಹಾಗೂ ವ್ಯಾನಿಟಿ ಬ್ಯಾಗ್‍ಗಳ ಆಧಿಕಾರದಲ್ಲಿ ಕೇಕ್‍ಗಳನ್ನು ತಯಾರಿಸಲಾಗಿತ್ತು. ಹೊಸ ಆಪಲ್ ಕೇಕ್‍ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು.
ಒಟ್ಟಿನಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಹೇಳಿಕೊಳ್ಳುವಷ್ಟು ಆಡಂಬರವಿಲ್ಲದಿದ್ದರೂ ಸಹ ಬೆಣ್ಣೆ ನಗರಿಯಲ್ಲಿ ನೂತನ ವರ್ಷವನ್ನು ಜನರು ಸಂಭ್ರಮದಿಂದ ಬರಮಾಡಿಕೊಂಡರು.
