ಇಂದಿನಿಂದಲೇ ಟೋಲ್ ಗಳಲ್ಲಿ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್ ಬರೆ..!

ಬೆಂಗಳೂರು, ಡಿ.30- ಎರಡು ದಿನ ಮೊದಲೇ ಟೋಲ್‍ಗಳಲ್ಲಿ ನಗದು ಪಾವತಿ ಸೌಲಭ್ಯವನ್ನು ಅಸ್ಪಷ್ಟಗೊಳಿಸಿದ್ದರಿಂದಾಗಿ ಭಾರೀ ಪ್ರಮಾಣದ ಗೊಂದಲದ ವಾತಾವರಣ ಹೆದ್ದಾರಿಯಲ್ಲಿ ನಿರ್ಮಾಣವಾಯಿತು. ಕೇಂದ್ರ ಸರ್ಕಾರ ಜನವರಿ ಒಂದರಿಂದ ಎಲ್ಲಾ ಟೋಲ್‍ಗಳಲ್ಲಿ ಫಾಸ್ಟ್ ಟ್ಯಾಗ್‍ನ್ನು ಕಡ್ಡಾಯಗೊಳಿಸಿದೆ. ಆದರೆ ಬೆಂಗಳೂರಿನ ನಾಗಸಂದ್ರ ಟೋಲ್‍ನಲ್ಲಿ ಇಂದಿನಿಂದಲೇ ಫಾಸ್ಟ್ ಟ್ಯಾಗ್‍ನ್ನು ಕಡ್ಡಾಯಗೊಳಿಸಲಾಗಿದೆ.

ನವಯುಗ ಸಂಸ್ಥೆ ನಗದು ಸ್ವೀಕಾರ ಪಥವನ್ನು ಅರ್ಧಂಬರ್ಧ ಉಳಿಸಲಾಗಿದೆ. ಇದರಿಂದ ಫಾಸ್ಟ್ ಟ್ಯಾಗ್ ಇರುವ ವಾಹನಗಳು ಮಾತ್ರ ಸಂಚರಿಸಬಹುದಾಗಿದ್ದು, ಫಾಸ್ಟ್‍ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ಒಂದಕ್ಕೆ ಎರಡರಷ್ಟು ದಂಡ ಪಾವತಿಸಬೇಕಾಯಿತು.

ಈ ಮೊದಲು ಈ ಟೋಲ್‍ನಲ್ಲಿ ಒಂದು ಪಥವನ್ನು ನಗದು ಪಾವತಿದಾರರಿಗಾಗಿ ಕಾಯ್ದಿರಿಸಲಾಗಿತ್ತು. ಇಂದು ಅದನ್ನು ಅಲ್ಲಿ ಸಿಬ್ಬಂದಿಗಳು ಕೆಲಸ ಮಾಡುತ್ತಿರಲಿಲ್ಲ. ಬಹುತೇಕ ಎಲ್ಲಾ ಪಥಗಳಲ್ಲೂ ಫಾಸ್ಟ್‍ಟ್ಯಾಗ್‍ಮೂಲಕವೇ ಟೋಲ್ ಪಾವತಿಸುವ ಪದ್ಧತಿ ಇದ್ದುದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

ಕಂಡೂ ಕಾಣದಂತೆ ಖಾಸಗಿ ಸಂಸ್ಥೆಯವರ ಅಧಿಕ ಪ್ರಸಂಗತನದಿಂದ ವಾಹನ ಸವಾರರು ಪರದಾಡುವಂತಹ ವಾತಾವರಣ ನಿರ್ಮಾಣವಾಯಿತು. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಎಲ್ಲಾ ಪಥಗಳಲ್ಲಿ ನುಗ್ಗಿದ್ದರಿಂದ ದುಪ್ಪಟ್ಟು ಶುಲ್ಕ ಭರಿಸಲು ಟೋಲ್ ಸಿಬ್ಬಂದಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಾಹನ ಮಾಲೀಕರು ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದು ಸಂಚಾರಕ್ಕೆ ತೊಂದರೆಯಾಯಿತು. ಹೀಗಾಗಿ ವಾಹನಗಳು ಸುಮಾರು ಐದು ಕಿಲೋ ಮೀಟರ್ ವರೆಗೂ ಸಾಲು ಗಟ್ಟಿ ನಿಂತಿದ್ದವು.

ಟೋಲ್ ರಸ್ತೆಗಳಲ್ಲಿ ಸಂಚರಿಸಲು ಇಚ್ಚಿಸದಿದ್ದವರಿಗೆ ಪರ್ಯಾಯ ಮಾರ್ಗ ನಿರ್ಮಾಣ ಮಾಡಬೇಕಿರುವುದು ಸಂಸ್ಥೆಗಳ ಜವಾಬ್ದಾರಿ. ಆದರೆ ರಾಜ್ಯದ ಬಹುತೇಕ ರಸ್ತೆಗಳಲ್ಲಿ ಪರ್ಯಾಯ ರಸ್ತೆ ಮತ್ತು ಸರ್ವಿಸ್ ರಸ್ತೆಗಳೇ ಇಲ್ಲ. ಹಾಗಾಗಿ ದುಪ್ಪಟ್ಟು ಶುಲ್ಕದ ಬರೆ ಹಾಕಿಸಿಕೊಂಡ ವಾಹನಗಳ ಮಾಲೀಕರು ಹಿಡಿ ಶಾಪ ಹಾಕುತ್ತಿದ್ದದ್ದು ಕಂಡು ಬಂತು.