ಕುಡಿದು ಕಿರಿಕ್ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ

Father Killed Son in Bengaluru

0
548
Father Kill Son

ಬೆಂಗಳೂರು, ಅ.19- ಕುಡಿದು ಮನೆಗೆ ಬಂದು ಜಗಳವಾಡುತ್ತಿದ್ದ ಮಗನನ್ನು ತಂದೆಯೇ ಮರದ ಪಟ್ಟಿಯಿಂದ ಹೊಡೆದು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಇಂದು ಬೆಳಗಿನ ಜಾವ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗದೇವನಹಳ್ಳಿಯ ಚಿತ್ರಕೂಟ ಶಾಲೆ ಹಿಂಭಾಗದ ನಿವಾಸಿ ರಾಜೇಶ್(36) ಕೊಲೆಯಾದ ಮಗ. ಈತ ವೃತ್ತಿಯಲ್ಲಿ ಕ್ಯಾಬ್ ಚಾಲಕ. ರಾಜೇಶನಿಗೆ ಮದುವೆಯಾಗಿದ್ದು,ಒಂದು ಮಗುವಿದೆ.

ಈತನ ಪತ್ನಿ ಜಗಳವಾಡಿಕೊಂಡು ತವರು ಮನೆ ಸೇರಿದ್ದಾರೆ. ತಂದೆ ಲಿಂಗಪ್ಪ, ತಾಯಿ ಪುಟ್ಟಮ ಜೊತೆ ರಾಜೇಶ್ ವಾಸವಾಗಿದ್ದನು. ಕ್ಯಾಬ್ ಚಾಲಕ ವೃತ್ತಿ ಮಾಡುತ್ತಿದ್ದ ಈತ ನಿತ್ಯ ಕುಡಿದು ಬಂದು ವಿನಾಃಕಾರಣ ತಂದೆ ಜೊತೆ ಜಗಳವಾಡುತ್ತಿದ್ದನು.

ನಿನ್ನೆ ಮಧ್ಯರಾತ್ರಿ 12.40ರ ಸುಮಾರಿನಲ್ಲಿ ಮದ್ಯಪಾನ ಮಾಡಿಕೊಂಡು ರಾಜೇಶ್ ಮನೆಗೆ ಬಂದು ತಂದೆ ಜೊತೆ ಜಗಳವಾಡಿ ರೂಮಿನ ಕಿಟಕಿ ಗ್ಲಾಸನ್ನು ಒಡೆದು, ಗೇಟನ್ನು ಕಾಲಿನಿಂದ ಒದ್ದು ರಂಪಾಟವಾಡಿದ್ದಾನೆ.

ಕೋಪಗೊಂಡ ಲಿಂಗಪ್ಪ ಕೈಗಳಿಂದ ರಾಜೇಶಗೆ ಹೊಡೆದು ಕಾಲಿನಿಂದ ಒದ್ದಿದ್ದಾರೆ. ಆಗ ತಂದೆ ಮೇಲೆಯೇ ಹಲ್ಲೆ ಮಾಡಿದ್ದಾನೆ. ಬೆಳಗಿನ ಜಾವ 1.40ರ ಸುಮಾರಿನಲ್ಲಿ ತಾಳೆ ಕಳೆದುಕೊಂಡ ಲಿಂಗಪ್ಪ ಅವರು ಕೈಗಳಿಂದ ರಾಜೇಶ್ಗೆ ಹೊಡೆದಿದ್ದಲ್ಲದೆ ಮರದ ಪಟ್ಟಿಯಿಂದ ತಲೆಗೆ ಹೊಡೆದಾಗ ಕೆಳಗೆ ಬಿದ್ದಿದ್ದಾನೆ.

ಆ ವೇಳೆ ರಾಜೇಶನ ಕೈಗಳನ್ನು ಹಗ್ಗದಿಂದ ಕಟ್ಟಿ ಅದೇ ಹಗ್ಗದಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ. ಮನೆಯಲ್ಲಿ ತಂದೆ- ಮಗನ ಮಧ್ಯೆ ಗಲಾಟೆಯಾಗುತ್ತಿರುವ ವಿಷಯವನ್ನು ಪುಟ್ಟಮ ಅವರು ಸಂಬಂಧಿಕ ಲೋಕೇಶ್ ಎಂಬುವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ತಕ್ಷಣ ಲೋಕೇಶ್ ಅವರು ಮನೆ ಬಳಿ ಹೋಗಿ ನೋಡಿದಾಗ ಮನೆಯ ಗೇಟಿನ ಪ್ಯಾಸೇಜ್ ಬಳಿ ರಾಜೇಶ್ ಅಂಗಾತವಾಗಿ ಮಲಗಿದ್ದು, ತಲೆಯಿಂದ ರಕ್ತ ಬರುತ್ತಿರುವುದು ಕಂಡು ಗಾಬರಿಯಾಗಿ ಹೊಯ್ಸಳಗೆ ಕರೆ ಮಾಡಿದ್ದಾರೆ.

ಹೊಯ್ಸಳ ಪೊಲೀಸರು ಬಂದು ನೋಡುವಷ್ಟರಲ್ಲಿ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಲಿಂಗಪ್ಪ ಅವರನ್ನು ವಶಕ್ಕೆ ಪಡೆದು ರಾಜೇಶ್ ಮೃತದೇಹವನ್ನು ಆರ್ಆರ್ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.