ತಂದೆ ಕೊಲೆಗೆ ಒಂದು ಕೋಟಿ ಸುಫಾರಿ ನೀಡಿದ್ದ ಮಗ ಸೇರಿ ಮೂವರ ಬಂಧನ

Social Share

ಬೆಂಗಳೂರು, ಫೆ.27- ಒಂದು ಕೋಟಿ ರೂ.ಗೆ ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ್ದ ಮಗ ಸೇರಿದಂತೆ ಮೂವರನ್ನು ಮಾರತ್‍ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುತ್ರ ಮಣಿಕಂಠ ಹಾಗೂ ಶಿವಕುಮಾರ್, ನವೀನ್ ಕುಮಾರ್ ಬಂತ ಆರೋಪಿಗಳು. ಅಪಾರ್ಟಮೆಂಟ್‍ನ ಪಾರ್ಕಿಂಗ್ ಲಾಟ್‍ನಲ್ಲಿ ಫೆ.13ರಂದು ನಾರಾಯಣಸ್ವಾಮಿ(70) ಎಂಬುವರ ಕೊಲೆ ಆಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾರತ್‍ಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕಿ ನಾರಾಯಣಸ್ವಾಮಿ ಅವರ ಪುತ್ರ ಮಣಿಕಂಠನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಒಂದು ಕೋಟಿ ರೂ.ಗೆ ಸುಪಾರಿ ನೀಡಿ ಮುಂಗಡವಾಗಿ ಒಂದು ಲಕ್ಷ ಹಣ ನೀಡಿ ಕೊಲೆ ಮಾಡಿಸಿರುವುದು ಗೊತ್ತಾಗಿದೆ.

ಈತನ ಹೇಳಿಕೆ ಆಧಾರದ ಮೇಲೆ ಇನ್ನಿಬ್ಬರು ಆರೋಪಿಗಳಾದ ಶಿವಕುಮಾರ್, ನವೀನ್‍ಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ಆರೋಪಿ ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ತದನಂತರ ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದು, ಒಂದು ಹೆಣ್ಣು ಮಗುವಿದೆ. ಎರಡನೇ ಮದುವೆ ಬಳಿಕವೂ ಮಣಿಕಂಠ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರ ಪತ್ನಿಗೆ ಗೊತ್ತಾಗಿ ಪತಿಯಿಂದ ದೂರವಿದ್ದಳು. ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.

ಆದರೆ ವಿಚ್ಛೇದನ ಕೊಡುವುದು ಬೇಡ ಎಂದು ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದರೂ, ಇದಕ್ಕೆ ಸೊಸೆ ಒಪ್ಪಲಿಲ್ಲ. ಹೀಗಾಗಿ ವಿಚ್ಛೇದನ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಜೀವನ ನಿರ್ವಹಣೆ ಕಷ್ಟ ಆಗುತ್ತೆ ಎಂದು ತಿಳಿದು ಸೈಟ್‍ವೊಂದನ್ನ ಅವರ ಹೆಸರಿಗೆ ಮಾಡಲು ಮಾವ ನಿರ್ಧರಿಸಿದ್ದರು.

ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ಎರಡನೇ ಪತ್ನಿಯನ್ನೂ ಕೊಲ್ಲಲು ಯತ್ನ:
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಆರೋಪಿ ಮಣಿಕಂಠ ಎರಡನೇ ಪತ್ನಿಗೂ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದನಂತೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಇಬ್ಬರಿಗೂ ಸಂಧಾನ ಮಾಡಿಕಳುಹಿಸಿದ್ದರು ಎಂಬುದು ಗೊತ್ತಾಗಿದೆ.

father, murder, son, including, Three, arrested, Bengaluru,

Articles You Might Like

Share This Article