ರಾಂಚಿ,ಜು. 11- ಹೊಟೇಲ್‍ವೊಂದರ ಕೊಠಡಿಯಲ್ಲಿ ತಂದೆ ಮತ್ತು ಮಗನನ್ನು ಹರಿತವಾದ ಆಯುಧಗಳಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ರಾಂಚಿಯಲ್ಲಿ ಸಂಭವಿಸಿದೆ. ಮೃತಪಟ್ಟ ತಂದೆ, ಮಗನನ್ನು ನಾಗೇಶ್ವರ್ ಮೆಹ್ತಾ ಹಾಗೂ ಅಭಿಷೇಕ್ ಮೆಹ್ತಾ ಎಂದು ಗುರುತಿಸಲಾಗಿದೆ.
ಹೊಟೇಲ್‍ನಲ್ಲಿ ನಡೆದಿರುವ ಭೀಕರ ಕೊಲೆಯ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಜರಿಬಾಗ್ ಜಿಲ್ಲೆಯ ಹಿಚಾಕ್ ಬ್ಲಾಕ್‍ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಹೊಟೇಲ್‍ನಲ್ಲಿ ತಂಗಿದ್ದ ತಂದೆ, ಮಗ ಸೇವಿಸಿದ ಊಟದಲ್ಲಿ ಡ್ರಗ್ಸ್ ಅನ್ನು ಬೆರೆಸಿ ನಂತರ ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಭಿಷೇಕ್ ಮೆಹ್ತಾ ಅವರು ಡಿಫ್ಲೋಮಾ ಇನ್ ಪಾರ್ಮಾಸಿ ವಿದ್ಯಾಭ್ಯಾಸ ಮಾಡಲು ಇಚ್ಛಿಸಿದ್ದು ಓದಿನ ಸಲುವಾಗಿ ಕರೆದಿದ್ದ ಇಂಟರ್‍ವ್ಯೂಗಾಗಿ ನಾಗೇಶ್ ಮೆಹ್ತಾ ಅವರು ರಾಂಚಿಗೆ ಬಂದು ಹೊಟೇಲ್‍ನಲ್ಲಿ ತಂಗಿದ್ದರು. ಇವರನ್ನು ಅವರ ಸಂಬಂಧಿಕರೊಬ್ಬರು ಭೇಟಿ ಮಾಡಿದ್ದು ಅವರನ್ನು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿರುವುದಾಗಿ ರಾಂಚಿಯ ಎಸ್‍ಪಿ ಅಂಷುಮನ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಂಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್ ಜಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಂದೆ ಮತ್ತು ಮಗನ ಕೊಲೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿರುವುದಲ್ಲದೆ, ಕೊಲೆ ನಡೆದ ಹೊಟೇಲ್‍ಗೆ ಬೆರಳಚ್ಚು ಹಾಗೂ ಶ್ವಾನದಳ ತಂಡದೊಂದಿಗೆ ತೆರಳಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದೇವೆ ಎಂದು ಹೇಳಿದರು.