ಬೆಂಗಳೂರು,ಸೆ.14- ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ಭಯ ಶುರವಾಗಿದೆ ಎಂದು ಕೃಷಿ ಸಚಿವ ಎನ್ .ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ, ಜೆಡಿಎಸ್ ಆಡಳಿತವಿದ್ದಾಗಲೂ ಬರ ಬಂದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲು ಬರ ಬಂದಿದೆ. ಹಾಗೆಯೇ ಅತಿವೃಷ್ಟಿಯೂ ಬಂದಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ರೇಖಾಚಿತ್ರ ಬಿಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬರಗಾಲ ಯಾರನ್ನಾದರೂ ಹೇಳಿ ಕೇಳಿ ಬರುತ್ತದೆಯೇ, ಬಿಜೆಪಿಯವರು ಸಂಸ್ಕಾರವಿಲ್ಲದೆ ಮಾತನಾಡುತ್ತಿದ್ದಾರೆ. ಬರದ ಬಗ್ಗೆ ಚರ್ಚೆ ಮಾಡಲು ಸಮಯ ಕೇಳಿದರೆ ಪ್ರಧಾನಿಯವರು ಸಮಯ ನೀಡುತ್ತಿಲ್ಲ. ಇಲ್ಲಿ ಸಿದ್ದರಾಮಯ್ಯನವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ. ಜೊತೆಗೆ ಬೇರೆ ಕೆಲಸಗಳೂ ನಡೆಯುತ್ತಿವೆ. 195 ತಾಲ್ಲೂಕು ಬರ ಪೀಡಿತವೆಂದು ಘೋಷಣೆ ಮಾಡಲಾಗಿದೆ. 34 ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಅರ್ಹವಾಗಿಲ್ಲ. ಅವುಗಳನ್ನೂ ಗೈಡ್ ಲೈನ್ಸ್ ಒಳಗೆ ತಂದು ಬರ ಪ್ರದೇಶ ಎಂದು ಘೋಷಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ತಾಲೂಕುಗಳಿಗೆ ಕೇಂದ್ರದ ನೆರವು ಸಿಗುತ್ತದೆಯೇ, ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ ಎಂದರು.
ರೈತರಿಗೆ ಐದು ಲಕ್ಷ ರೂ.ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ. ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದನ್ನೆಲ್ಲೇ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದೆ ಎಂದು ಹೇಳಿದರು.ನಾಲ್ಕು ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಈಗ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆಯ ಚರ್ಚೆಗಳು ನಡೆಯುತ್ತಿವೆ. ಏನಾಗಲಿದೆ ಎಂಬುದನ್ನು ಸ್ವಲ್ಪ ದಿನ ಕಾದು ನೋಡಬೇಕು. ಬಿಜೆಪಿ ಮತ್ತು ಜೆಡಿಎಸ್ ಎರಡೂ ಕಡೆ ಅಸಮಾಧಾನ ಸ್ಪೋಟವಾಗಿದೆ. ಎರಡೂ ಕಡೆ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ಕಾಲ ಕಾದು ನೋಡೋಣ ಎಂದರು.
ಜಾರಿಗೆ ಬರಲಿದೆಯಂತೆ ಹೊಸ EV ನೀತಿ, ಟೆಸ್ಲಾ ಜೊತೆ ಮಾತುಕತೆ
ಬಹಳ ಸ್ಪೀಡ್ ಆಗಿರೋದು ನಮ್ಮ ಬ್ರದರ್. ಎರಡು ಬಾರಿ ಮುಖ್ಯಮಂತ್ರಿ ಮಾಡಿದಾಗಲೇ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಪಕ್ಷ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸದೇ ಟೀಕಿಸಿದರು. ಬ್ರದರ್ ಮತ್ತು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಇಬ್ಬರೇ ಮೈತ್ರಿಯಾಗಲಿ ಎಂದು ಮಾತನಾಡುತ್ತಿರುವುದು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ನೋಡೋಣ ಏನಾಗಲಿದೆ ಎನ್ನುತ್ತಿದ್ದಾರೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ಗೂ ಈಗ ಅನಿವಾರ್ಯ. ಅವರು ನನ್ನ ಸ್ನೇಹಿತರು. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು. ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿದೆ. ಜೆಡಿಎಸ್ಗೆ ಬಿಜೆಪಿ ಅನಿವಾರ್ಯವಾಗಿದೆ. ಎರಡೂ ಪಕ್ಷಗಳೂ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿವೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮೊದಲು ಪ್ರತಿಪಕ್ಷ ನಾಯಕನನ್ನು ಘೋಷಣೆ ಮಾಡಿಕೊಂಡು ಬರಲಿ ಎಂದು ಅವರು ಬಿಜೆಪಿಗೆ ಸವಾಲು ಹಾಕಿದರು.
ಸಂಸದೆ ಸುಮಲತಾ ಅಂಬರೀಶ್ ಅವರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಮೊದಲು ಅವರು ಕೇಂದ್ರದಲ್ಲಿ ಯಾವ ಸಚಿವರನ್ನು ಭೇಟಿ ಮಾಡಿ ಕಾವೇರಿ ವಿಷಯದಲ್ಲಿ ನಾಡಿನ ರಕ್ಷಣೆಗೆ ಒತ್ತಾಯ ಮಾಡಿದ್ದಾರೆ ಎಂಬುದನ್ನು ಹೇಳಲಿ. ಬೇರೆ ವಿಷಯಕ್ಕೆಲ್ಲಾ ಸಚಿವರನ್ನು ಭೇಟಿ ಮಾಡುವ ಸಂಸದರು ಸಾರ್ವಜನಿಕ ವಿಷಯಕ್ಕೆ ಸಂಬಂಧಪಟ್ಟಂತೆ ಈವರೆಗೂ ಏಕೆ ಕೇಂದ್ರ ಮೇಲೆ ಒತ್ತಡ ಹೇರಿಲ್ಲ ಎಂದು ಪ್ರಶ್ನಿಸಿದರು..
#ElectionFear, #BJPleaders, #Chaluvarayaswamy, #teases,