ಫೆಬ್ರವರಿಗೂ ಶಾಲೆ-ಕಾಲೇಜು ಬಂದ್ ಮಾಡುವುದು ಸೂಕ್ತ : ಹೆಚ್‌ಡಿಕೆ

Social Share

ಬೆಂಗಳೂರು,ಜ.18- ಕೋವಿಡ್ 3ನೇ ಅಲೆ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿಗೂ ಶಾಲೆ, ಕಾಲೇಜು ಹಾಸ್ಟೆಲ್‍ಗಳನ್ನು ಬಂದ್ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ಕಫ್ರ್ಯೂನಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದರಿಂದ ಕೆಲವರಿಗೆ ಅನಾನುಕೂಲವಾಗಿದೆ. ಅಂಥವರಿಗೆ ರಿಯಾಯ್ತಿ ನೀಡಬೇಕು. ನೈಟ್ ಕರ್ಫ್ಯೂ ಜಾರಿ ಅವಶ್ಯಕತೆ ಇಲ್ಲ ಎಂದರು.
ವೀಕೆಂಡ್ ಕರ್ಫ್ಯೂನಿಂದ ಕೆಲವರಿಗೆ ಕಷ್ಟವಾಗಿದೆ. ಅಂಥವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಯ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರಾತ್ರಿ ಕರ್ಫ್ಯೂ ಬಗ್ಗೆ ಬಿಜೆಪಿ ಮುಖಂಡರಲ್ಲೇ ಗೊಂದಲವಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರಾತ್ರಿ ಕರ್ಫ್ಯೂ ಬೇಡ ಎಂದಿದ್ದಾರೆ. ಕರ್ಫ್ಯೂ ಬಗ್ಗೆ ವ್ಯಾಪಾರಿ ಸಂಘಟನೆಗಳು ಅಸಮಾಧಾನ ಹೊರಹಾಕಿವೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಧಾರ್ಮಿಕ ಕೇಂದ್ರಗಳಲ್ಲಿ ಜಾತ್ರೆ ನಡೆಯುತ್ತಿವೆ.
ನಿನ್ನೆ ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 40ರಿಂದ 50 ಸಾವಿರ ಜನರು ಭಾಗವಹಿಸಿದ್ದಾರೆ. ಅಲ್ಲಿ ಕೋವಿಡ್ ನಿಯಮಗಳನ್ನು ಜನ ಪಾಲಿಸಿದ್ದಂತಿಲ್ಲ ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ. 2ನೇ ಅಲೆಗೆ ಹೋಲಿಸಿದರೆ ಈ ಬಾರಿ ಅಂಥ ದೊಡ್ಡ ಅನಾಹುತವಾಗಿಲ್ಲ. ಮನೆಯಲ್ಲೇ ಬಹಳಷ್ಟು ಮಂದಿ ಗುಣವಾಗುತ್ತಿರುವುದು ಸಮಾಧಾನಕರ ಸಂಗತಿ ಎಂದರು.
ಕಳೆದೆರಡು ವರ್ಷಗಳಿಂದ ಸರ್ಕಾರದ ಮಾಡಿದ ಘೋಷಣೆ ಹಾಗೆಯೇ ಉಳಿದಿದೆ. ಶೇ.50ರಷ್ಟು ಕಾರ್ಯಕ್ರಮ ಅನುಷ್ಠಾನವಾಗಿಲ್ಲ. ದೇಶದ ಬಡವರ ಸಂಖ್ಯೆ ಹೆಚ್ಚುತ್ತಿದೆ. ಜನರಿಗೆ ಆರ್ಥಿಕ ನೆರವು ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಅಧಿಕಾರದಲ್ಲಿದ್ದಾಗ ಮಹದಾಯಿ ಬಗ್ಗೆ ಮಾತನಾಡಿಲ್ಲ. ಶಾಂತಿಯುತವಾಗಿ ಧರಣಿ ಮಾಡುತ್ತಿದ್ದವರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿದ್ದರು. ಪೊಲೀಸರ ಭಯಕ್ಕೆ ಜನ ಊರು ತೊರೆದಿದ್ದರು. ಆಗ ಕಾಂಗ್ರೆಸ್ ನಾಯಕರೇ ದಬ್ಬಾಳಿಕೆ ಮಾಡಿದ್ದರು. ಪ್ರತಿಭಟನಾ ನಿರತರನ್ನು ಜೈಲಿಗೆ ಹಾಕಿದರು ಎಂದು ವಾಗ್ದಾಳಿ ನಡೆಸಿದರು.
ಈಗ ಮಹದಾಯಿ ಯೋಜನೆಗಾಗಿ ಪಾದಯಾತ್ರೆ ಪ್ರಾರಂಭ ಮಾಡುತ್ತಾರಂತೆ ಹಿಂದೆ ಅಧಿಕಾರದಲ್ಲಿದ್ದಾಗ ಏಕೆ ಸುಮ್ಮನಿದ್ದರು. ನೀರಿನ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಕಾವೇರಿ, ತುಂಗೆ, ಮಹಾದಾಯಿ, ಕೃಷ್ಣ ಎಲ್ಲದರಲ್ಲೂ ಪೆಟ್ಟು ತಿಂದಿದ್ದೇವೆ. ನಮ್ಮ ನೀರನ್ನು ನಾವು ಬಳಸಿಕೊಳ್ಳಲಾಗುತ್ತಿಲ್ಲ.
ಚುನಾವಣೆ ಬಂದಾಗ ನೀರಿನ ವಿಷಯ ಮುಂದಿಟ್ಟು ರಾಜಕೀಯ ಮಾಡುತ್ತಾರೆ. 13 ಸಾವಿರ ಕೋಟಿ ರೂ. ಖರ್ಚಾಗಿದ್ದರೂ ಒಂದೇ ಒಂದು ಯೋಜನೆ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಯನ್ನು ಕಾಂಗ್ರೆಸ್‍ನವರು ನಮ್ಮದು ಎಂದು ಹೇಳುತ್ತಾರೆ. ಆದರೆ ನಾವು ಕೊಟ್ಟ ಡಿಪಿಆರ್ ಇದೆ. ಇನ್ನು ಮೂರು ವರ್ಷ ಕಳೆದರೆ ಮೇಕೆದಾಟಿಗೆ 100 ವರ್ಷ ತುಂಬಲಿದೆ. ಕಾಂಗ್ರೆಸ್‍ನವರ ಪಾದಯಾತ್ರೆಯಿಂದ ನಮಗೆ ಆತಂಕವಿಲ್ಲ. ಇನ್ನು ಒಂದು ವರ್ಷ ಮಾಡಲಿ. ಅವರು ಪಾದಯಾತ್ರೆ ನಿಲ್ಲಿಸಿದರು ಎಂದು ನಾವು ಜಲಧಾರೆ ಮುಂದೂಡುತ್ತಿಲ್ಲ. ಜನರ ಮಾರಣಹೋಮ ನಮಗೆ ಬೇಕಿಲ್ಲ ಎಂದರು.
ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಜ.26ರಿಂದ ಪ್ರಾರಂಭಿಸಬೇಕಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

Articles You Might Like

Share This Article