ಜ್ಯೂರಿಚ್/ನವದೆಹಲಿ,ಆ.16- ಮೂರನೇ ವ್ಯಕ್ತಿಯ ಅನಗತ್ಯ ಹಸ್ತಕ್ಷೇಪ ಮತ್ತು ಅಂತಾರಾಷ್ಟ್ರೀಯ ಫುಟ್ ಬಾಲ್ ನಿಯಮಗಳ ಸರಣಿ ಉಲ್ಲಂಘನೆ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಎಫ್‍ಐಎಫ್‍ಎ) ಭಾರತ ಫುಟ್ಬಾಲ್ ಸಂಸ್ಥೆಯ ಮಾನ್ಯತೆಯನ್ನು ಅಮಾನತೊಳಿಸಿದೆ.
ಈ ಮೂಲಕ ಅ.11ರಿಂದ 30ರವರೆಗೆ ನಡೆಯಲಿದ್ದ 17 ವರ್ಷದೊಳಗಿನ ಮಹಿಳಾ ವಿಶ್ವ ಫುಟ್ ಬಾಲ್ ಪಂದ್ಯಾವಳಿ ನಡೆಸುವ ಅಧಿಕಾರವನ್ನು ಭಾರತೀಯ ಫುಟ್ಬಾಲ್ ಸಂಸ್ಥೆ ಕಳೆದುಕೊಂಡಿದೆ. ಭಾರತೀಯ ಫುಟ್ಬಾಲ್ ಸಂಸ್ಥೆಯ ಆಡಳಿತ ಮಂಡಳಿಗೆ ಕಾರ್ಯಕಾರಿ ಸದಸ್ಯರು ಚುನಾಯಿತಗೊಂಡು ಪೂರ್ಣಪ್ರಮಾಣದಲ್ಲಿ ಅಧಿಕಾರ ವಹಿಸಿಕೊಳ್ಳುವವರೆಗೂ ಅಮಾನತು ಮುಂದುವರೆಯಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.
ಈ ನಡುವೆ ಭಾರತದ ಯೋಜನಾ ಮತ್ತು ಕ್ರೀಡಾ ಸಚಿವಾಲಯದೊಂದಿಗೆ ನಿರಂತರ ಸಂಪರ್ಕ ಮುಂದುವರೆಸಿದ್ದು, ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವುದಾಗಿ ಎಫ್‍ಐಎಫ್‍ಎ ಹೇಳಿದೆ. ಕಳೆದ 2020ರ ಡಿಸೆಂಬರ್‍ನಿಂದಲೂ ಚುನಾವಣೆ ನಡೆಸದೆ ಭಾರತೀಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಸ್ಥಾನ ಹೊಂದಿರುವ ಕುರಿತು ಅಸಮಾಧಾನ ವ್ಯಕ್ತಡಿಸಿದ್ದ ಸುಪ್ರೀಂಕೋರ್ಟ್ ಕಳೆದ ಮೇ 18ರಂದು ಪ್ರಫುಲ್ ಪಟೇಲ್ ಅವರನ್ನು ವಜಾಗೊಳಿಸಿತ್ತು. ಜತೆಗೆ ನ್ಯಾಯಮೂರ್ತಿ ಎ.ಆರ್.ದಾವೆ ನೇತೃತ್ವದಲ್ಲಿ ಮೂರು ಜನರ ಆಡಳಿತಾತ್ಮಕ ಸಮಿತಿ ರಚಿಸಿತ್ತು.
ಉನ್ನತ ನ್ಯಾಯಾಲಯದ ಈ ಸಮಿತಿ ಫುಟ್ಬಾಲ್ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಣೆ ಮಾಡುತ್ತಿದೆ. ಸಮಿತಿ ರಾಷ್ಟ್ರೀಯ ಕ್ರೀಡಾ ಸಂಹಿತೆ ಮತ್ತು ಮಾದರಿ ಮಾರ್ಗಸೂಚಿಗಳ ಚೌಕಟ್ಟಿನಲ್ಲೇ ಕೆಲಸ ನಿರ್ವಹಿಸುತ್ತಿದೆ.
ಭಾರತೀಯ ಫುಟ್ಬಾಲ್ ಸಂಸ್ಥೆಗೆ ಇದೇ 28ರಂದು ಚುನಾವಣೆ ನಡೆಯಲಿದ್ದು, 13ರಿಂದ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ನಡುವೆ 85 ವರ್ಷಗಳ ಇತಿಹಾಸ ಹೊಂದಿರುವ ಫುಟ್ಬಾಲ್ ಸಂಸ್ಥೆಯಲ್ಲಿ 3ನೇ ವ್ಯಕ್ತಿಗಳ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದಂತಾಗಿದೆ.