2018ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ : ರಾಘವೇಂದ್ರ ರಾಜ್‍ಕುಮಾರ್-ಮೇಘನಾ ರಾಜ್ ಅತ್ಯುತ್ತಮ ನಟ-ನಟಿ

ಬೆಂಗಳೂರು, ಜ.10- ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್ (ಅತ್ಯುತ್ತಮ ನಟ), ಮೇಘನಾ ರಾಜ್ (ಅತ್ಯುತ್ತಮ ನಟಿ) ಅವರು 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಪ್ರಶಸ್ತಿಗಳ ಪಟ್ಟಿಯನ್ನು ಪ್ರಕಟಿಸಿದರು.

ಜೀವಮಾನಸಾಧನೆಗಾಗಿ ಡಾ.ರಾಜ್‍ಕುಮಾರ್ ಪ್ರಶಸ್ತಿಗೆ ಹಿರಿಯ ನಟ ಜೆ.ಕೆ.ಶ್ರೀನಿವಾಸಮೂರ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ಬಿ.ಎಸ್.ಬಸವರಾಜು ಅವರಿಗೆ ನೀಡಲಾಗಿದ್ದು, ಪ್ರಶಸ್ತಿಯು 5 ಲಕ್ಷ ರೂ. ನಗದು ಬಹುಮಾನ, 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

2018ನೇ ಸಾಲಿಗೆ ಒಟ್ಟು 8 ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅದರಲ್ಲಿ ಆ ಕರಾಳ ರಾತ್ರಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ ಎಚ್.ಎಲ್.ಎನ್.ಸಿಂಹ ಪ್ರಶಸ್ತಿ, ಚಿತ್ರ ನಿರ್ಮಾಣ ಮಾಡಿರುವ ದಿ ಪಿಕ್ಚರ್ಸ್ ಸಂಸ್ಥೆಗೆ ಕೆಸಿಎನ್ ಗೌಡ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ಒಂದು ಲಕ್ಷ ನಗದು, 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ.

ರಾಮನ ಸವಾರಿ ಅತ್ಯುತ್ತಮ 2ನೇ ಚಿತ್ರವಾಗಿದ್ದು, ಸುಧಾ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು ಕೆ.ಶಿವರುದ್ರಯ್ಯ ನಿರ್ದೇಶಿಸಿದ್ದಾರೆ. ಈ ಪ್ರಶಸ್ತಿ 75 ಸಾವಿರ ನಗದು 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ. ಒಂದಲ್ಲ- ಎರಡಲ್ಲ ಚಿತ್ರ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ನಿರ್ಮಾಣ ಮಾಡಿದ ಪಿ.ಎನ್.ಸಿನಿಮಾಸ್ ಸಂಸ್ಥೆ, ನಿರ್ದೇಶಕರಾದ ಡಿ.ಸತ್ಯಪ್ರಕಾಶ್ ಅವರಿಗೆ 50 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುವುದು.

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರಕ್ಕೆ ಸಂತ ಕವಿ ಕನಕದಾಸರ ರಾಮ ಧಾನ್ಯ ಚಿತ್ರ ಆಯ್ಕೆಯಾಗಿದ್ದು, ಲಕ್ಷ್ಮೀ ನರಸಿಂಹ ಮೂವೀ ಸಂಸ್ಥೆ ನಿರ್ಮಾಣ ಮಾಡಿದೆ. ಟಿ.ಎನ್.ನಾಗೇಶ್ ನಿರ್ದೇಶಿಸಿದ್ದಾರೆ. ಈ ಪ್ರಶಸ್ತಿ 75 ಸಾವಿರ ನಗದು 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನಿರ್ಮಾಣ ಮಾಡಿದ ರಿಷಭ್‍ಶೆಟ್ಟಿ ಫಿಲಂಸ್‍ಗೆ ನರಸಿಂಹರಾಜು ಪ್ರಶಸ್ತಿ ಹಾಗೂ ನಿರ್ದೇಶಕ ರಿಷಭ್‍ಶೆಟ್ಟಿಗೆ ತಲಾ 50 ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಹೂವು-ಬಳ್ಳಿ ಅತ್ಯುತ್ತಮ ಮಕ್ಕಳ ಚಿತ್ರವಾಗಿದ್ದು, ಚಂದ್ರಿಕಾ ಫಿಲಂಸ್ ಹಾಗೂ ನಿರ್ದೇಶಕ ಬಿ.ಮಂಜುನಾಥ್ ಅವರಿಗೆ ಹಾಗೂ ಬೆಳಕಿನ ಕನ್ನಡಿ ಚಿತ್ರ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನಿರ್ಮಾಣ ಸಂಸ್ಥೆ ರಾಜ್ ಹಮ್ಮಿನಿ ನಿರ್ದೇಶಕರಿಗೆ ತಲಾ 50 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ ಪ್ರಶಸ್ತಿ ನೀಡಲಾಗುತ್ತಿದೆ. ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ತುಳುವಿನ ದೇಹಿ ಬೈದೇಹಿ ಚಿತ್ರದ ನಿರ್ಮಾಣದ ಸಂಸ್ಥೆ ಸಂಕ್ರಿ ಮೋಷನ್ ಪಿಕ್ಚರ್ಸ್, ನಿರ್ದೇಶಕ ಸುರ್ಯೋದಯ ಅವರಿಗೆ ತಲಾ 50 ನಗದು, 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.

ಅಮ್ಮನ ಮನೆ ಚಿತ್ರದ ನಟನೆಗಾಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಅತ್ಯುತ್ತಮ ನಟ ಸುಬ್ಬ ನಾಯ್ಡು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇರುವುದೆಲ್ಲವ ಬಿಟ್ಟು ಚಿತ್ರದ ನಟನೆಗೆ ಮೇಘನಾರಾಜ್ ಅತ್ಯುತ್ತಮ ನಟಿ ಪ್ರಶಸ್ತಿಗೆ, ಚೂರಿ ಕಟ್ಟೆ ಚಿತ್ರದಲ್ಲಿ ಬಾಲಾಜಿ ಮನೋಹರ್ ನಟನೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಆ ಕರಾಳ ರಾತ್ರಿ ಚಿತ್ರದ ನಟನೆಗಾಗಿ ವೀಣಾ ಸುಂದರ್ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಹಾಗೂ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಬಾಲಾಜಿ ಮನೋಹರ್ ಭಾಜನರಾಗಿದ್ದಾರೆ.

ನಾಯಿಗೆರೆ ಚಿತ್ರದ ಎಸ್.ಹರೀಶ್ ಅವರಿಗೆ ಅತ್ಯುತ್ತಮ ಕಥೆ, ಮೂಕಜ್ಜಿಯ ಕನಸುಗಳು ಚಿತ್ರದ ಪಿ.ಶೇಷಾದ್ರಿ ಅವರಿಗೆ ಅತ್ಯುತ್ತಮ ಚಿತ್ರಕಥೆ, ಸಾವಿತ್ರಿಬಾಯಿ ಫುಲೆ ಚಿತ್ರದ ಶಿರಿಷಾ ಜೋಷಿ ಅವರಿಗೆ ಅತ್ಯುತ್ತಮ ಸಂಭಾಷಣೆ, ಅಮಚ್ಚಿ ಯೆಂಬ ನೆನಪು ಚಿತ್ರದ ನವೀನ್ ಕುಮಾರ್ ಐ ಅವರಿಗೆ ಅತ್ಯುತ್ತಮ ಛಾಯಾಗ್ರಹಣ, ಕೆಜಿಎಫ್ ಚಿತ್ರದ ರವಿ ಬಸ್ರೂರ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ, ತ್ರಾಟಕ ಚಿತ್ರದ ಸುರೇಶ್ ಆರ್ಮುಗಂ ಅವರಿಗೆ ಅತ್ಯುತ್ತಮ ಸಂಕಲನ, ರಾಮನ ಸವಾರಿ ಚಿತ್ರದ ಮಾಸ್ಟರ್ ಆ್ಯರೆನ್ ಅವರಿಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ, ಅಂದವಾದ ಚಿತ್ರದ ಬೇಬಿ ಸಿಂಚನ ಅವರಿಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ, ಕೆಜಿಎಫ್ ಚಿತ್ರದ ಶಿವಕುಮಾರ್.ಜೆ. ಅತ್ಯುತ್ತಮ ಕಲಾನಿರ್ದೇಶಕ ಪ್ರಶಸ್ತಿಗಳನ್ನು ಘೊಷಣೆ ಮಾಡಲಾಗಿದೆ.

ಬಯಲಾಟದ ಭೀಮಣ್ಣ ಚಿತ್ರದ ಸಾವೇ… ಸಾವೇ… ಹಾಡಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಅತ್ಯುತ್ತಮ ಗೀತರಚನೆ, ಸಂತ ಕವಿಕನಕದಾಸರ ರಾಮಧಾನ್ಯ ಚಿತ್ರದ ಇರುಳ ಚಂದಿರನ ಹಾಡಿಗಾಗಿ ಸಿದ್ಧಾಥ್ ಬೆಳ್ಮಣ್ಣು ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ, ಕಲಾವತಿ ದಯಾನಂದ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ, ಸಮಾನತೆಯ ಕಡೆಗೆ ಚಿತ್ರಕ್ಕೆ ಅನಂತರಾಯಪ್ಪ ಎಚ್. ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ, ಅಬ್ಬೆ ತುಮಕೂರು ಸಿದ್ಧಪುರುಷ ವಿಶ್ವರಾಧ್ಯರು ವಿ.ಥಾಮಸ್ ಅವರಿಗೆ ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅತ್ಯುತ್ತಮ ನಟ ನಟಿ ಪ್ರಶಸ್ತಿಗಳು ತಲಾ 20 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಎನ್.ಎಸ್.ಶಂಕರ್ ಅವರು ರಚಿಸಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿರುವ ಚಿತ್ರಕಥೆ ಹಾಗೆಂದರೇನು ಪುಸ್ತಕ ಹಾಗೂ ಡಾ.ಶರಣು ಹುಲ್ಲೂರು ರಚಿಸಿ, ಸಾವಣ್ಣ ಎಂಟರ್‍ಪ್ರೈಸಸ್ ಪ್ರಕಟಿಸಿರುವ ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ ವರ್ಣರಂಜಿತ ಬದುಕು ಪುಸ್ತಕಕ್ಕೆ ಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದು ತಲಾ 10 ಸಾವಿರ ನಗದು, 25 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.

ಮನೋಜ್‍ಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ಪಡುವಾರಳ್ಳಿ ಕಿರುಚಿತ್ರಕ್ಕೆ ಪ್ರಶಸ್ತಿ ಘೋಷಿಸಲಾಗಿದ್ದು, 25 ಸಾವಿರ ನಗದು, 50 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ನಟ, ನಿರ್ದೇಶಕ ಜೋಸೈಮನ್ ಅವರ ನೇತೃತ್ವದ ಸಮಿತಿ 162 ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ. ಜೀವಮಾನ ಪ್ರಶಸ್ತಿ ಪುರಸ್ಕøತರನ್ನು ಬಸಂತಕುಮಾರ್ ಪಾಟೀಲ್ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಸಿದ್ದರಾಮಪ್ಪ, ಮುಖ್ಯಮಂತ್ರಿಯವರ ಸಲಹೆಗಾರರಾದ ಲಕ್ಷ್ಮೀನಾರಾಯಣ, ಸಮಿತಿಯ ಮುಖ್ಯಸ್ಥರಾದ ಜೋಸೈಮನ್ ಮತ್ತು ಬಸಂತ್‍ಕುಮಾರ್ ಪಾಟೀಲ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.