ಉತ್ತರ ಪ್ರದೇಶದಲ್ಲಿ ಇಂದು ಕೊನೆಯ ಹಂತದ ಮತದಾನ

Social Share

ಲಕ್ನೋ, ಮಾ.7 – ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ಇಂದು ಬೆಳಗ್ಗೆ
ಆರಂಭಗೊಂಡು ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ. ಇದರೊಂದಿಗೆ ಪಂಚರಾಜ್ಯಗಳ ಮಾಹಾ ಸಮರ ಅಂತ್ಯಗೊಳ್ಳಲಿದದ್ದು, ಮಾ.10ರ ಪಲಿತಾಂಶದ ಮೇಲೆ ಇಡೀ ದೇಶದ ಚಿತ್ತ ಹರಿದಿದೆ.
ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ 54 ಸ್ಥಾನಗಳಿಗೆ ಇಂದು ಮತದಾನ ಬಿರುಸಿನಿಂದ ನಡೆದಿದ್ದು, ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ಸೇರಿದಂತೆ ಹಲವು ರಾಜ್ಯ ಸಚಿವರ ಭವಿಷ್ಯ ಈ ಸುತ್ತಿನಲ್ಲಿ ನಿರ್ಧಾರವಾಗಲಿದೆ. ಇದರಲ್ಲಿ 2.06 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚಾಕಿಯಾ (ಚಂದೌಲಿ), ರಾಬಟ್ಸ್‍ಗಂಜ್ ಮತ್ತು ದುದ್ಧಿ (ಸೋನ್ಭದ್ರ) ಸ್ಥಾನಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಉಳಿದ ಕ್ಷೇತ್ರಗಳಲ್ಲಿ ಇಂದು ಸಂಜೆ 6 ರವರೆಗೆ ಮುಂದುವರಿಯುತ್ತದೆ.
ಅಜಂಗಢ,  ಜೌನ್ಪುರ್, ಘಾಜಿಪುರ, ಚಂದೌಲಿ, ವಾರಣಾಸಿ, ಮಿಜರ್ಪುರ, ಭದೋಹಿ ಮತ್ತು ಸೋನ್ಭದ್ರಾದಲ್ಲಿ ಮತದಾನ ನಡೆಯಲಿದೆ. ಸಮಾಜವಾದಿ ಪಕ್ಷದ ಸಿಎಂ ಅಭ್ಯರ್ಥಿ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ,ಬಿಎಸ್ಪಿ ವರಿಷ್ಠೆ ಮಾಯಾವತಿ, ಪ್ರಿಯಾಂಕ ಗಾಂ ಸೇರಿದಂತೆ ಘಟಾನುಘಟಿಗಳು ಬಿಜೆಪಿ ವಿರುದ್ದ ಭಾರಿ ಸಮರವನ್ನೇ ಸಾರಿದ್ದು, ಕೇಸರಿ ಪಡೆಯಲ್ಲಿನ ಬಂಡಾಯದ ಲಾಭ ಪಡೆಯಲು ಭಾರಿ ಕಸರತ್ತು ನಡೆಸಿದ್ದರು. ಅದಕ್ಕೆ ತಕ್ಕ ತಿರುಗೇಟು ನೀಡಿ ಸಿಎಂ ಆದಿತ್ಯಾನಾಥ್ ,ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದ್ದರು.
ಇನ್ನು ಪಂಜಾಬ್‍ನಲ್ಲಿ ಕಾಂಗ್ರೇಸ್, ಆಮ್‍ಆದ್ಮಿ, ಅಕಾಲಿ ದಳ, ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು ಮಾಜಿ ಸಿಎಂ ಅಮರೇಂದ್ರ ಸಿಂಗ್ ಹೊಡೆತ ಕಾಂಗ್ರೇಸ್‍ಗೆ ಪೆಟ್ಟು ನೀಡಲಿದೆಯೇ ಅಥವಾ ಕಾಂಗ್ರೇಸ್ ಮತ್ತೆ ಅಕಾರ ಹಿಡಿಯಲಿದೆಯೇ ಎಂಬ ಕುತೂಹಲವಿದೆ. ಆದರೆ ಆಮ್‍ಆದ್ಮಿ ಕಮಾಲ್ ಮಾಡಲಿದೆ ಎನ್ನಲಾಗುತ್ತಿದೆ.
ಗೋವಾದಲ್ಲಿ ಚದುರಂಗದಾಟ ನಡೆದಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಕಂಡರೂ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಹೊಸ ಅಲೆ ಸೃಷ್ಠಿಸಿದೆ. ಉತ್ತರಾಖಂಡ ಹಾಗು ಮಣಿಪುರದಲ್ಲೂ ಭಾರಿ ಲೆಕ್ಕಾಚಾರದೊಂದಿಗೆ ಬಿಜೆಪಿ ಅಕಾರ ಉಳಿಸಿ ಕೊಳ್ಳಲು ತಂತ್ರಗಾರಿಕೆ ನಡೆಸಿದ್ದು, ಇದೆಲ್ಲದರ ಫಲ ಮಾ.10 ಕ್ಕೆ ಬಹಿರಂಗವಾಗಲಿದೆ.

Articles You Might Like

Share This Article