ರಾಜ್ಯದ ಅಭಿವೃದ್ಧಿಯ ಮೂಲ ಆಧಾರ ಸ್ತಂಭ ಎಂದೇ ಭಾವಿಸಲಾಗುವ ಹಣಕಾಸು ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಬೀಡುಬಿಟ್ಟಿರುವ ಐಎಎಸ್ ಹಾಗೂ ಇತರ ಅಧಿಕಾರಿಗಳು ಕೊಕ್ಕೆ ಮಾಸ್ಟರ್‍ಗಳಾಗಿದ್ದು, ರಾಜ್ಯವನ್ನು ಸುಮಾರು 10 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಸಂಪನ್ಮೂಲ ಸಂಗ್ರಹ, ಅದರ ಬಳಕೆ ಮತ್ತು ನಿರ್ವಹಣೆ ಹಣಕಾಸು ಇಲಾಖೆಯ ಪ್ರಮುಖ ಜವಾಬ್ದಾರಿ. ರಾಜ್ಯಪಾಲರಿಂದ ಹಿಡಿದು ಡಿ ಗ್ರೂಪ್ ನೌಕರರವರೆಗೂ ಪ್ರತಿಯೊಬ್ಬರ ವೇತನ ಸಹಿತ ಎಲ್ಲಾ ಖರ್ಚು ವೆಚ್ಚಗಳನ್ನು ಹಣಕಾಸು ಇಲಾಖೆಯೇ ನಿರ್ವಹಣೆ ಮಾಡಲಿದೆ.
ಇದರ ನಡುವೆ ಯೋಜನಾ ವೆಚ್ಚ ನಿರ್ವಹಣೆಯಲ್ಲಿ ಹಣಕಾಸು ಇಲಾಖೆ ಹಲವಾರು ವರ್ಷಗಳಿಂದ ತಗಾದೆ ತೆಗೆಯುವುದನ್ನೇ ಕಾಯಕ ಮಾಡಿಕೊಂಡಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ವಿಧಾನಮಂಡಲದ ಪ್ರತಿ ಅಧಿವೇಶನದಲ್ಲೂ ಅತಿ ಹೆಚ್ಚು ಟೀಕೆ ಮತ್ತು ಆಕ್ಷೇಪಕ್ಕೆ ಗುರಿಯಾಗುವುದೆಂದರೆ ಅದು ಹಣಕಾಸು ಇಲಾಖೆ. ಸಚಿವರೂ ಸೇರಿದಂತೆ ಪಕ್ಷಾತೀತವಾಗಿ ಎಲ್ಲಾ ಶಾಸಕರು ಒಕ್ಕೊರಲಿನಿಂದ ಹಣಕಾಸು ಇಲಾಖೆಯ ಅಧಿಕಾರಿಗಳ ಧೋರಣೆಯನ್ನು ಟೀಕಿಸುತ್ತಲೇ ಇರುತ್ತಾರೆ.
ಇತ್ತೀಚೆಗಂತೂ ಹಣಕಾಸು ಇಲಾಖೆಯನ್ನು ಮುಖ್ಯಮಂತ್ರಿಯಾದವರೇ ತಮ್ಮ ಬಳಿ ಇಟ್ಟುಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಈ ಮೊದಲು ಎಸ್.ಎಂ.ಕೃಷ್ಣ ಅವರು ಹಣಕಾಸು ಇಲಾಖೆಯನ್ನು ತಮ್ಮ ಬಳಿ ಇಟ್ಟುಕೊಂಡು ನಿಬಾಯಿಸಿದ್ದರು.
ಬಳಿಕ ಧರ್ಮಸಿಂಗ್ ಹೊರತುಪಡಿಸಿ ಉಳಿದೆಲ್ಲಾ ಮುಖ್ಯಮಂತ್ರಿಗಳು ಹಣಕಾಸು ವ್ಯವಹಾರದ ಈ ಖಾತೆಯನ್ನು ತಾವೇ ನಿರ್ವಹಣೆ ಮಾಡಿದ್ದಾರೆ.
ಜನಸಾಮಾನ್ಯರು, ಸಣ್ಣ ಪ್ರಮಾಣದ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ತಲುಪುವುದು ತ್ರಾಸದಾಯಕ. ಇರುವುದರಲ್ಲೇ ಶಾಸಕರು ಆಗೋ-ಹೀಗೋ ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಹಣಕಾಸು ಇಲಾಖೆಯ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರೂ ಅದು ಅರಣ್ಯ ರೋಧನವಾಗುತ್ತದೆ.
ಪ್ರತಿಯೊಂದು ಬಾಬ್ತುಗಳಿಗೂ ಹಣಕಾಸು ಇಲಾಖೆ ತಗಾದೆ ತೆಗೆಯದೆ ಅನುಮತಿ ನೀಡಿದ ಉದಾಹರಣೆ ವಿರಳ. ಕೆಲವೊಮ್ಮೆ ಖಾತೆಯನ್ನು ನಿರ್ವಹಿಸುವವರು ಅಧಿಕಾರಿಗಳ ತಗಾದೆಯನ್ನು ಲೆಕ್ಕಿಸದೆ ಮಂಜೂರಾತಿ ನೀಡಿ ಜನಪರ ಯೋಜನೆಗಳನ್ನು ಕೈಗೊಳ್ಳುತ್ತಾರೆ.
ಆದರೆ, ಬಹಳಷ್ಟು ಬಾರಿ ಅಧಿಕಾರಿಗಳು ಕಾನೂನು ಹಾಗೂ ನಿಯಮಾವಳಿಗಳ ಅಡೆತಡೆಗಳನ್ನು ಮುಂದಿಟ್ಟು ತಗಾದೆ ತೆಗೆದಾಗ ಮುಖ್ಯಮಂತ್ರಿಯಾದಿಯಾಗಿ ಸಚಿವರು ನಿಸ್ಸಾಹಯಕರಾಗುವುದು ಸಾಮಾನ್ಯವಾಗಿದೆ.
ಇತ್ತೀಚೆಗೆ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಡತವನ್ನು ತಿರಸ್ಕರಿಸಲು 101 ಕಾರಣಗಳು ಸಿಗಬಹುದು. ಆದರೆ, ಜನಪರವಾದ ಕೆಲಸ ಮಾಡುವ ಮನಸ್ಸಿದ್ದರೆ ಒಂದೇ ಒಂದು ಸಕಾರಣವನ್ನು ಮುಂದಿಟ್ಟುಕೊಂಡು ಕಡತವಿಲೇವಾರಿ ಮಾಡಲು ಸಾಧ್ಯವಿದೆ. ಆದರೆ, ಅದಕ್ಕೆ ಅಧಿಕಾರಿಗಳಿಗೆ ಜನಪರವಾದ ನಿಲುವುಗಳು ಇರಬೇಕು ಎಂದು ಹೇಳಿದ್ದು ಸ್ಮರಣೀಯ.
ಹಣಕಾಸು ಇಲಾಖೆಯಲ್ಲಿ ಜನಪರ ನಿಲುವಿನ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಐದು ಸಾವಿರ ಕೋಟಿ ರೂ.ಗಳ ಸಂಪನ್ಮೂಲ ಕೊರತೆಯನ್ನು ಆರ್ಥಿಕ ಇಲಾಖೆ ತೋರಿಸಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಮಾತುಗಳಿಗೆ ಗೋಣು ಆಡಿಸದೆ ಎಲ್ಲೆಲ್ಲಿ ಸಂಪನ್ಮೂಲ ಸಂಗ್ರಹಿಸಬಹುದು ಎಂಬ ಮಾಹಿತಿ ನೀಡಿ ಪಟ್ಟಾಗಿ ಕೆಲಸ ತೆಗೆದಿದ್ದರಿಂದಾಗಿ ಐದು ಸಾವಿರ ಕೋಟಿ ರೂ.ಗಳ ಕೊರತೆ ನೀಗುವ ಜತೆಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ.ಗಳ ಆದಾಯ ಸಂಗ್ರಹವಾಗಿತ್ತು.
ಈಗಲೂ ಸಂಪನ್ಮೂಲ ಸಂಗ್ರಹದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ. ಇದಕ್ಕೆ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನ ಕಾರಣ ಎಂದು ಹೇಳಬಹುದು. ಆದರೆ, ಅದೇ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಸರ್ಕಾರ ಎಡವಿದೆ.
ದಿನಕ್ಕೊಂದು ತಗಾದೆಗಳ ಸುತ್ತೋಲೆ ಹೊರಡಿಸುವ ಮೂಲಕ ಹಣಕಾಸು ಇಲಾಖೆ ಅಭಿವೃದ್ಧಿಗೆ ಕಂಟಕಪ್ರಾಯವಾಗುತ್ತಿದೆ. ಇಲಾಖೆಯಲ್ಲಿ ಐಎಎಸ್ ಅಧಿಕಾರಿಗಳು, ಒಬ್ಬರು ಐಪಿಒಎಸ್ ಅಧಿಕಾರಿ ಮುಂದಾಳತ್ವ ವಹಿಸಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿ ಹಲವಾರು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ.
ಮೂರ್ನಾಲ್ಕು ಬಾರಿ ವರ್ಗಾವಣೆಯಾದರೂ ಬೇರೆ ಇಲಾಖೆಗೆ ಹೋಗದೆ ಹಣಕಾಸು ಇಲಾಖೆಯಲ್ಲೇ ಠಿಕಾಣಿ ಹೂಡಿದ್ದು, ವೆಚ್ಚ, ಕಂದಾಯ, ಬಜೆಟ್, ಸಂಪನ್ಮೂಲ, ವಿತ್ತ ನಿರ್ವಹಣೆ, ಆಡಳಿತ ಸೇರಿದಂತೆ ವಿವಿಧ ಘಟಕಗಳಲ್ಲಿ ಗಿರಕಿ ಹೊಡೆಯುವ ಮೂಲಕ ಅಪತ್ಯ ಸಾಧಿಸಿದ್ದಾರೆ.
ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಅವರು 2014ರಿಂದ ಹಣಕಾಸು ಇಲಾಖೆ ಬಿಟ್ಟು ಅಲುಗಾಡಿಲ್ಲ. ಇನ್ನು ಕಾರ್ಯದರ್ಶಿಗಳಾದ ಏಕ್‍ರೂಪ್ ಕೌರ್ ಅವರು 2017ರಿಂದ, ಪಿ.ಸಿ.ಜಾಫರ್ ಅವರು 2018ರಿಂದ ಇಲಾಖೆಯಲ್ಲೇ ಮುಂದುವರೆದಿದ್ದಾರೆ.
ಹೆಚ್ಚುವರಿ ಕಾರ್ಯದರ್ಶಿಗಳಾದ ನಿತೀಶ್ ಕೆ. ಮತ್ತು ಮೊಹಮ್ಮದ್ ಇಕ್ರಾಮ್ ಉಲ್ಲಾ ಶರೀಫ್ ಅವರು ಸುಮಾರು 4 ವರ್ಷಗಳಿಂದಲೂ ಹಣಕಾಸು ಇಲಾಖೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕಾರ್ಯದರ್ಶಿಯಾಗಿರುವ ಏಕ್‍ರೂಪ್ ಕೌರ್ ಅವರು ಈ ಜವಾಬ್ದಾರಿಯ ಜತೆಗೆ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‍ಎಫ್‍ಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಕಳೆದ 5 ವರ್ಷಗಳಿಂದ ಮುಂದುವರಿದಿದ್ದಾರೆ. ಹಾಗೂ ಮತ್ತೊಬ್ಬ ಕಾರ್ಯದರ್ಶಿ ಪಿ.ಸಿ.ಜಾಫರ್ ಸಹ ಈಗಿರುವ ಜವಾಬ್ದಾರಿಯ ಜತೆಗೆ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಪಾನಿಯ ನಿಗಮ(ಕೆಎಸ್‍ಬಿಸಿಎಲ್)ದ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಳೆದ 4 ವರ್ಷಗಳಿಂದ ಮುಂದುವರೆದಿದ್ದಾರೆ.
ಹೆಚ್ಚುವರಿ ಹುದ್ದೆ ನಿರ್ವಹಿಸುವ ಸಂಸ್ಥೆಗಳಿಂದ ಮತ್ತಷ್ಟು ಅಧಿಕಾರ ಹಾಗೂ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ.
ಐಎಎಸ್ ಅಧಿಕಾರಿಗಳಿಗೆ ಎರಡು ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಮುಂದುವರೆಯಲು ಅವಕಾಶವಿಲ್ಲ ಎಂಬ ನಿಯಮವಿದೆ. ಆದರೆ, ಸುಮಾರು 8 ವರ್ಷಗಳಿಂದಲೂ ಒಂದೇ ಇಲಾಖೆಯಲ್ಲಿ ಈ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಈ ರೀತಿ ಬೇರುಬಿಟ್ಟವರು ಇಲಾಖೆಯಲ್ಲಿ ಅಪತ್ಯ ಸಾಧಿಸುವುದಲ್ಲದೆ ಜನಪ್ರತಿನಿಧಿಗಳ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂಬುದು ಸಾಮಾನ್ಯವಾಗಿ ಕಾಡುವ ವಿಷಯ. ಇಲಾಖೆಯಲ್ಲಿ ಕೆಲಸ ಮಾಡಲು ಬೇರೆ ಯಾರೂ ಗತಿ ಇಲ್ಲ ಎಂಬ ಮಟ್ಟಕ್ಕೆ ಆಯ್ದ ಅಧಿಕಾರಿಗಳನ್ನೇ ಮುಂದುವರೆಸುವುದು ಅಚ್ಚರಿಗೆ ಕಾರಣವಾಗಿದೆ.
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಹಣಕಾಸು ಇಲಾಖೆಯ ಅಧಿಕಾರಿಗಳು ಮಾತ್ರ ಸ್ಥಾನಪಲ್ಲಟ ಮಾಡಲು ಸಾಧ್ಯವಾಗಿಲ್ಲ. ಇದು ಜನ ಸಾಮಾನ್ಯರನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.