ಬೆಂಗಳೂರು,ಆ.4-ಅಭಿವೃದ್ಧಿ ಕೆಲಸಗಳ ವಿಷಯದಲ್ಲಿ ಹಣಕಾಸು ಇಲಾಖೆ ಸದಾಕಾಲ ಖಳನಾಯಕನಂತೆಯೇ ವರ್ತಿಸುತ್ತದೆ ಎಂಬ ಆಕ್ಷೇಪಗಳು ನಿರಂತರವಾಗಿ ಕೇಳಿ ಬರುತ್ತವೆ. ಯಾವುದೇ ಅಧಿವೇಶನ ನಡೆದರೂ ಅಲ್ಲಿ ಅತಿ ಹೆಚ್ಚು ಆಕ್ರೋಶಗಳು ಕೇಳಿಬರುವುದು ಹಣಕಾಸು ಮತ್ತು ಅರಣ್ಯ ಇಲಾಖೆಗಳ ವಿರುದ್ಧ. ಇಷ್ಟೆಲ್ಲ ಅಪವಾದಗಳ ನಡುವೆಯೂ ಕೂಡ ಹಣಕಾಸು ಇಲಾಖೆ ಮತ್ತೊಂದು ಉದ್ದಟತನದ ಆದೇಶ ಹೊರಡಿಸುವ ಮೂಲಕ ರಾಜ್ಯದ ಅಭಿವೃದ್ಧಿ ವೇಗವನ್ನು 20 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುವ ದುವರ್ತನೆ ತೋರಿಸಿದೆ.
ಇತ್ತೀಚೆಗೆ ರಾಜ್ಯ ಹಣಕಾಸು ಇಲಾಖೆ ಸುತ್ತೋಲೆ ಹೊರಡಿಸಿದ್ದು, ಟೆಂಡರ್ ಲಾಭಾಂಶದ ಪ್ರಮಾಣವನ್ನು ಶೇ.10ರಿಂದ 5ಕ್ಕೆ ಕಡಿತ ಮಾಡಿದೆ. ಶೇ.5ಕ್ಕಿಂತ ಮೇಲ್ಪಟ್ಟ ಟೆಂಡರ್ ಲಾಭಾಂಶ ಉಲ್ಲೇಖಿತವಾದರೆ ಆ ಬಿಡ್ಅನ್ನು ರದ್ದು ಮಾಡಿ ಹೊಸ ಟೆಂಡರ್ ಕರೆಯಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
ಇದು ಸಂಪೂರ್ಣ ಅವೈಜ್ಞಾನಿಕ ಮತ್ತು ಅಪ್ರಜ್ಞಾವಸ್ಥೆಯ ಆದೇಶ ಎಂಬ ಆಕ್ರೋಶಗಳು ಕೇಳಿಬರುತ್ತಿವೆ. ಕೋವಿಡ್ ವೇಳೆ ವಾಣಿಜ್ಯ ಹಾಗೂ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿದ್ದವು. ಕೋವಿಡ್ ನಂತರ ಒಂದಿಷ್ಟು ಉಸಿರಾಡುವಂತಾಗಿ, ಚುರುಕು ಪಡೆಯುವ ಸಂದರ್ಭದಲ್ಲೇ ಆರ್ಥಿಕ ಇಲಾಖೆ ಇಂತಹ ಅದ್ವಾನದ ಆದೇಶವನ್ನು ಹೊರಡಿಸಿದೆ.
ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಸಾಗಾಣಿಕೆ ಮತ್ತು ಸಾರಿಗೆ ವೆಚ್ಚ ದುಬಾರಿಯಾಗಿದೆ. ಜಿಎಸ್ಟಿ ದರಗಳು ಶೇ.5ರಿಂದ 12ಕ್ಕೆ, ಶೇ.12ರಿಂದ 18ಕ್ಕೆ ಪರಿಷ್ಕರಣೆಯಾಗಿವೆ. ಬಹಳಷ್ಟು ಸರಕುಗಳ ಜಿಎಸ್ಟಿ ಏರಿಕೆಯಾಗಿದೆ. ಕಬ್ಬಿಣ, ಸೀಮೆಂಟ್, ಪೇಪರ್, ವೈಜ್ಞಾನಿಕ ಸಲಕರಣೆಗಳು, ಜೀವರಕ್ಷಕ ಔಷಧಿಗಳು, ದವಸ-ಧಾನ್ಯ, ಕಾರ್ಮಿಕ ವೆಚ್ಚ, ವಿದ್ಯುತ್ ಬಿಲ್ ಸೇರಿದಂತೆ ಎಲ್ಲವೂ ದುಬಾರಿಯಾಗಿವೆ. ಕನಿಷ್ಠವೆಂದರೂ 2019ಕ್ಕಿಂತ ಈ ವರ್ಷದ ವೆಚ್ಚ ಶೇ.40ರಷ್ಟು ಹೆಚ್ಚಾಗಿದೆ.
ಸರ್ಕಾರ ಯಾವುದೇ ಯೋಜನೆಗಳ ವಿಸ್ತೃತ ವರದಿ ತಯಾರಿಸುವಾಗ ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಮಾರ್ಗಸೂಚಿಗಳು ಸಮರ್ಪಕವಾಗಿಲ್ಲ. ಆಯಾ ಕಾಲಕ್ಕೆ ಅಧಿಕಾರಿಗಳ ಮರ್ಜಿಯ ಮೇಲೆ ಕ್ರಿಯಾ ಯೋಜನೆಗಳು ತಯಾರುಗೊಳ್ಳುತ್ತವೆ.
ಬಹುತೇಕ ಅಧಿಕಾರಿಗಳು ತಮ್ಮನ್ನು ತಾವು ಸಭ್ಯರು ಎಂದು ಸಾಬೀತುಪಡಿಸಿಕೊಳ್ಳಲು ಹಿಂದಿನ ವರ್ಷದ ಟೆಂಡರ್ ಮೊತ್ತದ ಮೇಲೆ ಕನಿಷ್ಠ ಪ್ರಮಾಣದ ಏರಿಕೆ ಮಾಡಿ ಯೋಜನಾ ವೆಚ್ಚವನ್ನು ನಿಗದಿ ಮಾಡುತ್ತಾರೆ. ಟೆಂಡರ್ ಪ್ರಕ್ರಿಯೆ ಹಂತದಲ್ಲಿ ಬಿಡ್ದಾರರು ಅಸಲಿ ವೆಚ್ಚವನ್ನು ನಮೂದಿಸಿ ಅರ್ಜಿ ಸಲ್ಲಿಸುತ್ತಾರೆ.
ಹಣಕಾಸು ಇಲಾಖೆಯ ಸುತ್ತೋಲೆ ಪ್ರಕಾರ ಸರ್ಕಾರದ ಅವೈಜ್ಞಾನಿಕ ಯೋಜನಾ ವೆಚ್ಚವನ್ನೇ ಒಪ್ಪಿಕೊಳ್ಳಬೇಕು. ಅದರಲ್ಲೇ ಗುತ್ತಿಗೆ ನಿರ್ವಹಣೆ ಮಾಡಬೇಕು ಎಂಬ ಸರ್ವಾಧಿಕಾರಿ ದೋರಣೆ ಅಡಗಿದಂತಿದೆ. ಕಾಲುನುಕ್ರಮದಲ್ಲಿ ಹೆಚ್ಚಾಗಿರುವ ದುಬಾರಿ ವೆಚ್ವವನ್ನು ಪರಿಗಣಿಸದೆ ಕಡಿಮೆ ಮೊತ್ತಕ್ಕೆ ಕೆಲಸ ನಿರ್ವಹಿಸಿದರೆ ಅದರಲ್ಲಿ ಗುಣಮಟ್ಟ ಕಾಪಾಡುವುದು ಅಸಾಧ್ಯದ ಮಾತು. ಹೀಗಾಗಿ ಎಲ್ಲಾ ಕಾಮಗಾರಿಗಳು ಕಳಪೆಯಾಗುವ ಆತಂಕವಿದೆ.
ಶೇ.5ಕ್ಕಿಂತ ಮೇಲ್ಪಟ್ಟ ಟೆಂಡರ್ ಲಾಭಾಂಶದ ಬಿಡ್ಗಳನ್ನು ಮರು ಟೆಂಡರ್ ಮಾಡಬೇಕೆಂಬ ಆದೇಶದ ಅನುಸಾರ ಯಾವ ಕಾಮಗಾರಿಗಳು ಅಂಗೀಕಾರಗೊಳ್ಳುವುದಿಲ್ಲ. ಪದೇ ಪದೇ ಟೆಂಡರ್ ಕರೆಯುತ್ತಲೇ ಇರಬೇಕಾಗುತ್ತದೆ. ಚುನಾವಣಾ ವರ್ಷದಲ್ಲಿ ಅಭಿವೃದ್ಧಿ ಕೆಲಸಗಳಾಗದೆ ಸರ್ಕಾರಕ್ಕೆ ಈಗಿರುವ ಕಳಂಕದ ಜತೆಗೆ ಮತ್ತಷ್ಟು ಕೆಟ್ಟ ಹೆಸರು ಬರುವ ಸಾಧ್ಯತೆಗಳಿವೆ.
ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಅದೀನದಲ್ಲೇ ಇದ್ದರೂ ಅದು ಯಾರ ನಿಯಂತ್ರಣದಲ್ಲಿದೆ ಎಂಬ ಅನುಮಾನಗಳು ಮೂಡಲಾರಂಭಿಸಿವೆ. ಈ ರೀತಿಯ ಅಪ್ರಬುದ್ಧ ಆದೇಶಗಳನ್ನು ಕಣ್ಣುಮುಚ್ಚಿ ಸಹಿಸಿಕೊಳ್ಳಲು ಒಂದು ಜವಾಬ್ದಾರಿಯುತ ಸರ್ಕಾರ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡಲಾರಂಭಿಸಿದೆ.
ಕೋವಿಡ್ ವೇಳೆ ಬಹಳಷ್ಟು ಕೈಗಾರಿಕೆಗಳು, ಸಂಸ್ಥೆಗಳು, ಉದ್ಯಮಗಳು ಮುಚ್ಚಿ ಹೋಗಿವೆ. ಕೋವಿಡೋತ್ತರದಲ್ಲೂ ದುಬಾರಿ ವೆಚ್ಚದಿಂದಾಗಿ ಉತ್ಪಾದನೆ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗದೆ ಶೇ.15ರಷ್ಟು ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಇದ್ಯಾವುದರ ಬಗ್ಗೆಯೂ ಕಾಳಜಿ ಇಲ್ಲದೆ ಆರ್ಥಿಕ ಇಲಾಖೆ ತನ್ನ ಮೂಗಿನ ನೇರಕ್ಕೆ ಆದೇಶಗಳನ್ನು ಹೊರಡಿಸುತ್ತಿದೆ.
ಮುಖ್ಯಮಂತ್ರಿಗಳು ಮತ್ತು ಜವಬ್ದಾರಿಯುತ ಸಂಪುಟದ ಸದಸ್ಯರು ಆರ್ಥಿಕ ಇಲಾಖೆಯ ಅದ್ವಾನಗಳ ಮೇಲೆ ನಿಗಾ ಇಟ್ಟು ಜನ ಸಾಮಾನ್ಯರ ಪರವಾದ ನಿಲುವುಗಳಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.