ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆಯುತ್ತಿದ್ದ 15 ಮಂದಿ ಹೈಟೆಕ್ ಖದೀಮರ ಅರೆಸ್ಟ್

ಮೈಸೂರು, ಜು.3 -ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆಯುತ್ತಿದ್ದ 15 ಮಂದಿ ಹೈಟೆಕ್ ಖದೀಮರನ್ನ್ನು ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಚೋಳಮಂಡಲಂ ಫೈನಾನ್ಸ್‍ಗೆ ದೋಖಾ ಮಾಡಿದ 15 ಮಂದಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದು ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಬಂಧಿತರಿಂದ 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್‍ಟಾಪ್ ಅನೇಕ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

10 ಲಾರಿಗಳಿಗೆ ಒಟ್ಟು 1,35,53,000 ರೂ ಸಾರಿಗೆ ವಾಹನ ಸಾಲ ಪಡೆದಿದ್ದ ಖದೀಮರು ಕೆಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ಬಳಿಕ ಸಾಲದ ಮಾಸಿಕ ಕಂತು ಕಟ್ಟುವುದನ್ನ ಆರೋಪಿಗಳು ನಿಲ್ಲಿಸಿದ್ದಾರೆ. ಈ ವೇಳೆ ಲಾರಿ ವಶಕ್ಕೆ ಪಡೆಯಲು ಫೈನಾನ್ಸ್ ಕಂಪನಿ ಮುಂದಾಗಿದ್ದು, ಈ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಈ ನಡುವೆ ಆರೋಪಿಗಳು ಲಾರಿಗಳನ್ನ ಇಂಜಿನ್ ಚಾಸಿರ್ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್ ವಿಜಯ್ ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ಠಾಣೆಗೆ ದೂರು ನೀಡಿದ್ದರು. 2019-2020 ಸಾಲಿನ ಲಾರಿ ಸಾಲದ ಬಗ್ಗೆ ಉಲ್ಲೇಖಿಸಿ ದೂರು ನೀಡಿದ್ದರು.

ನಂತರ ದೇವರಾಜ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಆರೋಪಿಗಳು ಲಾರಿ ಇಲ್ಲದೆಯೇ ಆಂಧ್ರಪ್ರದೇಶದ ವಿವಿಧ ಆರ್‍ಟಿಒ ಕಚೇರಿಯಲ್ಲಿ ಆರ್‍ಸಿ, ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೊಂದಣಿಗೆ ಸಲ್ಲಿಕೆ ಮಾಡಿದ್ದರು. ಇದಕ್ಕೆ ಸ್ಥಳೀಯ ನಕಲಿ ವಿಳಾಸದ ದಾಖಲೆ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ.

ಲಾರಿ ಪರಿಶೀಲನೆಗೆ ಹಾಜರುಪಡಿಸದೆ ಖದೀಮರು ಆರ್ಸಿ ಕಾರ್ಡ್ ಪಡೆಯುತ್ತಿದ್ದರು. ಬರೋಬ್ಬರಿ 200 ಆರ್ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹೀಗೆ ಹಲವು ಫೈನಾ£್ಸï ಕಂಪನಿಗಳಿಗೆ ನಕಲಿ ದಾಖಲೆ ನೀಡಿ ಆರೋಪಿಗಳು ಮೋಸ ಮಾಡಿದ್ದು ಈ ಬಗ್ಗೆಯು ತನಿಖೆ ನಡೆಯುತ್ತಿದ್ದು, ಆರ್‍ಟಿಒ ಅಧಿಕಾರಿಗಳು ಶಾಮೀಲಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನು ತನಿಖೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಪೊಲೀಸ್ ತಂಡ ತೆರಳಿದೆ.