ಬೆಂಗಳೂರು,ಮಾ.9-ನಿಗತ ಸಮಯಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲು ವಿಫಲವಾಗಿರುವ ಸಂಸ್ಥೆ ವಿರುದ್ಧ ಬಿಬಿಎಂಪಿ ಎಫ್‍ಐಆರ್ ದಾಖಲಿಸಿದೆ.
ನಗರದ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾರ್ಯದ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಈಜಿಪುರದಿಂದ ಕೊರಮಂಗಲದ ಕೇಂದ್ರಿಯ ಸದನದವರೆಗಿನ ಮೇಲ್ಸೇತುವೆ ನಿರ್ಮಾನ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಸಂಸ್ಥೆ ನಿಗತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
203 ಕೋಟಿ ರೂ.ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಗುತ್ತಿಗೆ ಪಡೆದಿದ್ದ ಸಂಸ್ಥೆಯವರು 2017ರಿಂದ 2021ರ ವೇಳೆಗೆ ಫ್ಲೈಓವರ್ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿತ್ತು. ಆದರೆ, ಕೊಟ್ಟ ಮಾತಿಗೆ ತಪ್ಪಿರುವ ಸಂಸ್ಥೆಯವರು 2021 ಮುಗಿದು 2022 ಆರಂಭಗೊಂಡಿದ್ದರೂ ಇನ್ನು ಶೇ.45 ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಳಿಸಿದ್ದಾರೆ.
ಇದರಿಂದ ಸಾರ್ವಜನಿಕ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತಂತೆ ಪಾಲಿಕೆ ನೀಡಿದ ಎಚ್ಚರಿಕೆಯನ್ನು ಸಂಸ್ಥೆಯವರು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಗುತ್ತಿಗೆ ಸಂಸ್ಥೆಯ ನಿರ್ದೇಶಕ ರಾಜೀವ್ ಮುಂದಾ ಅವರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸ್ವತಃ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರರಾಗಿರುವ ಗೀತಾ ಅವರು ಠಾಣೆಗೆ ತೆರಳಿ ಗುತ್ತಿಗೆ ಸಂಸ್ಥೆ ವಿರುದ್ಧ ದೂರು ನೀಡಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಂಪ್ಲೆಕ್ಸ್ ಸಂಸ್ಥೆ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿವೇಶನದಲ್ಲಿ ಎಚ್ಚರಿಕೆ ನೀಡಿದ್ದರೂ. ಇದರ ಬೆನ್ನಲ್ಲೆ ಬಿಬಿಎಂಪಿ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿದ್ದಾರೆ.
