ಬೆಂಗಳೂರು, ಜ.15- ಮಧ್ಯ ರಾತ್ರಿ ಬ್ಯಾಟರಾಯನಪುರದ ಟಿಂಬರ್ ಯಾರ್ಡ್ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಬೆಲೆಬಾಳುವ ಮರಮಟ್ಟುಗಳು ಹಾಗೂ ಪ್ಲೇವುಡ್ಗಳು ಸುಟ್ಟುಹೋಗಿವೆ.
ಮೈಸೂರು ರಸ್ತೆಯಲ್ಲಿರುವ ನ್ಯೂ ಟಿಂಬರ್ ಯಾರ್ಡ್ನ ಪ್ಲೇವುಡ್ ಮತ್ತು ಟಿಂಬರ್ ಡಿಪೋನಲ್ಲಿ ಮಧ್ಯರಾತ್ರಿ 12.45ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ 26ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿ 100ಕ್ಕೂ ಹೆಚ್ಚು ಸಿಬ್ಬಂದಿಗಳು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.
ಈ ಪ್ರದೇಶದಲ್ಲಿ ಹಲವಾರು ಪ್ಲೇವುಡ್ ಹಾಗೂ ಟಿಂಬರ್ ಡಿಪೋಗಳಿವೆ. ಬೆಂಕಿ ಅನಾಹುತ ಸಂಭವಿಸಿದ ಸ್ಥಳದ ಸಮೀಪದಲ್ಲೇ ಅನಿಲ ಸರಬರಾಜು ಗೋಡೌನ್ ಕೂಡ ಇದೆ. ಬೆಂಕಿ ಅನಾಹುತ ಸಂಭವಿಸಿದಾಗ ಅದು ಅಕ್ಕ-ಪಕ್ಕದ ಅಂಗಡಿಗಳಿಗೆ ಹರಡದಂತೆ ಹೆಚ್ಚಿನ ಮುತುವರ್ಜಿ ವಹಿಸಿ ಯಾವುದೇ ದೊಡ್ಡ ಅನಾಹುತ ಸಂಭವಿಸಿದಂತೆ ಕಟ್ಟೆಚ್ಚರ ವಹಿಸಿ ಬೆಂಕಿ ಜ್ವಾಲೆಯನ್ನು ನಂದಿಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಮರ, ದಿಮ್ಮಿಗಳು ಬೆಂಕಿಯ ಕೆನ್ನಾಲಿಗೆ ಸಿಕ್ಕಿ ಸುಟ್ಟು ಕರಕಲಾಗಿವೆ. ಹೊಗೆ ಮುಗಿಲೆತ್ತರಕ್ಕೆ ಚಿಮ್ಮುತ್ತಿತ್ತು.
ಬ್ಯಾಟರಾಯನಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಂಕರನಾಯಕ ಅವರು ರಾತ್ರಿಯೇ ಸುದ್ದಿ ತಿಳಿದು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು.
ಸುಮಾರು 4 ಕೋಟಿಯಷ್ಟು ಮರದ ದಿಮ್ಮಿಗಳು, ಪ್ಲೇವುಡ್ಗಳು ಹಾಗೂ ಇನ್ನಿತರ ವಸ್ತುಗಳು ಸುಟ್ಟುಹೋಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಂಕ್ರಾಂತಿ ದಿನದಂದೇ ಬೆಂಕಿಯ ಅವಘಡ ಸಂಭವಿಸಿದೆ. ಜನವಸತಿ ಪ್ರದೇಶಗಳು ಹತ್ತಿರದಲ್ಲೇ ಇದ್ದರೂ ಕೂಡ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬುದು ಸಮಾಧಾನಕಾರ ಸಂಗತಿಯಾಗಿದೆ.
#FireAccident, #Byatarayanapura, #TimberYard,