ಕ್ಯಿವ್, ಮಾ.4- ಯುದ್ಧ ಪೀಡಿತ ಉಕ್ರೇನ್ ನಲ್ಲಿನ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ಮೇಲೆ ರಷ್ಯಾ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಬಾಂಬ್ ದಾಳಿ ನಡೆಸಿದ್ದು, ಜಗತ್ತು ಬೆಚ್ಚಿ ಬಿಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಅಣು ರಿಯಾಕ್ಟರ್ ಹಾಗೂ ಅಗತ್ಯ ಸಲಕರಣೆಗಳು ಹಾನಿಗೊಳಗಾಗಿಲ್ಲ ಎಂಬ ಮಾಹಿತಿಯಿಂದ ನಿಟ್ಟುಸಿರು ಬಿಡಲಾಗಿದೆ.
ಜಾಗತಿಕ ರಾಷ್ಟ್ರಗಳ ಪ್ರತಿರೋಧದ ನಡುವೆಯೂ ರಷ್ಯಾ ತನ್ನ ಆಕ್ರಮಣ ಪ್ರವೃತ್ತಿಯನ್ನು ಮುಂದುವರೆಸಿದ್ದು, ಯುದ್ಧ 9ನೆ ದಿನಕ್ಕೆ ಕಾಲಿಟ್ಟಿದೆ. ಎರಡು ಕಡೆಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳಾಗಿವೆ. ರಷ್ಯಾದಲ್ಲಿ 9 ಸಾವಿರಕ್ಕೂ ಹೆಚ್ಚು ಮಂದಿ ಯೋಧರ ಹತ್ಯೆಯಾಗಿರುವ ಮಾಹಿತಿ ಇದ್ದು, ಸಾಕಷ್ಟು ಯುದ್ಧ ಸಲಕರಣೆಗಳು, ವಾಹನಗಳು ನಷ್ಟಕ್ಕೊಳಗಾಗಿವೆ.
ಇದಕ್ಕೆ ಪ್ರತಿಯಾಗಿ ಉಕ್ರೇನ್ ನ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದ ಬಹುತೇಕ ನಗರಗಳು ಅಕ್ಷರಶಃ ಸ್ಮಶಾನ ಸದೃಶ್ಯವಾಗಿವೆ. ರಸ್ತೆ, ಜನವಸತಿ ಪ್ರದೇಶಗಳು ಹಾನಿಗೊಳಗಾಗಿವೆ. ಪದೇ ಪದೇ ನಡೆಯುತ್ತಿರುವ ಶೆಲ್ ದಾಳಿಯಿಂದ ಜನ ಭಯಭೀತರಾಗಿ ಮೆಟ್ರೋ ಸ್ಟೇಷನ್‍ಗಳ ನೆಲ ಮಹಡಿ ಹಾಗೂ ಬಂಕರ್ ಗಳಲ್ಲಿ ಅಡಗಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಜೀವನಾವಶ್ಯಕ ವಸ್ತುಗಳಿಗೂ ತತ್ವಾರ ಉಂಟಾಗಿದೆ.
ಈ ನಡುವೆ ಇಂದು ಬೆಳಗ್ಗೆ ರಷ್ಯಾ ಝಪೊರಿಜ್ಯಜಿಯಾದಲ್ಲಿರುವ ಅಣುಸ್ಥಾವರದ ಮೇಲೆ ಮುಂಜಾನೆ ಆರು ಗಂಟೆ ಸುಮಾರಿಗೆ ಬಾಂಬ್ ದಾಳಿ ನಡೆಸಿದೆ ಎನ್ನಲಾಗಿದೆ. ಉಕ್ರೇನ್ ನಲ್ಲಿ ಸುಮಾರು 4 ಅಣು ವಿದ್ಯುತ್ ಸ್ಥಾವರಗಳಿದ್ದು, ಅದರಲ್ಲಿ ಝಪೊರಿಜ್ಯಜಿಯಾ ಘಟಕ ಏಷ್ಯದಲ್ಲೇ ದೊಡ್ಡದು ಎನ್ನಲಾಗಿದೆ. ಇಲ್ಲಿ ಆರು ರಿಯಾಕ್ಟರ್ ಗಳಿವೆ ಎಂಬ ಮಾಹಿತಿ ಇದೆ.
ಬಾಂಬ್ ದಾಳಿಯಿಂದ ಸ್ಥಾವರದ ಸುತ್ತಲೂ ಹೊಗೆ ತುಂಬಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಷ್ಯಾ ಸ್ಥಾವರದ ಸುತ್ತಾ ಶೆಲ್ ಹಾಗೂ ಗುಂಡಿನ ದಾಳಿಯನ್ನು ಮುಂದುವರೆಸಿದ್ದರಿಂದ ಅಗ್ನಿ ಶಾಮಕ ಪಡೆಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಬೆಂಕಿಯ ಕೆನ್ನಾಲಿಗೆಗಳು ಆಕಾಶದೆತ್ತರಕ್ಕೆ ಚಿಮ್ಮಿದ್ದವು. ಸ್ಥಾವದರಲ್ಲಿನ ರಿಯಾಕ್ಟರ್‍ಗೆ ಬೆಂಕಿ ತಗುಲಿದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಒಂದು ವೇಳೆಗೆ ಸ್ಥಾವರದಲ್ಲಿ ರಿಯಾಕ್ಟರ್‍ಗಳಿಗೆ ಹಾನಿಯಾಗಿ ಅಣು ವಿಕಿರಣಗಳು ಸೋರಿಕೆಯಾದರೆ ಈ ಮೊದಲಿನ ಚರ್ನೂಬಿಲ್ ದುರಂತಕ್ಕಿಂತಲೂ 10 ಪಟ್ಟು ಹೆಚ್ಚು ಅಪಾಯ ಸಂಭವಿಸುವ ಆತಂಕವಿದೆ. ಕೂಡಲೇ ದಾಳಿಯನ್ನು ನಿಲ್ಲಿಸಿ ಎಂದು ಉಕ್ರೇನ್ ರಕ್ಷಣಾ ಸಚಿವರು ಮನವಿ ಮಾಡಿದ್ದರು. ಅಣು ಸ್ಥಾವರದ ಮೇಲೆ ಬಾಂಬ್ ದಾಳಿ ನಡೆದಿದೆ ಎಂಬ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ವಿಶ್ವದ ಹಲವು ರಾಷ್ಟ್ರಗಳು ಆತಂಕಕ್ಕೆ ಒಳಗಾದವು.
ತಕ್ಷಣವೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅಮೆರಿಕಾದ ಅಧ್ಯಕ್ಷ ಜೋ ಬಿಡನ್ ಅವರು ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ ಝೆಲೆನಕ್ಸಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಮಾಹಿತಿ ಪಡೆದಿದ್ದಾರೆ. ಅದೃಷ್ಟವಶಾತ್ ಸ್ಥಾವರದ ಅಗತ್ಯ ಉಪಕರಣಗಳಿಗೆ ಯಾವುದೇ ಹಾನಿಯಾಗಿಲ್ಲ, ರೆಡಿಯೇಷನ್ ಮಟ್ಟದಲ್ಲೂ ಬದಲಾವಣೆಯಾಗಿಲ್ಲ ಎಂದು ಸ್ಥಾವರದ ಉಸ್ತುವಾರಿ ಅಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಜೋ ಬಿಡೆನ್ ಸ್ಥಾವರದ ಮೇಲಿನ ದಾಳಿಗೆ ಕಳವಳ ವ್ಯಕ್ತ ಪಡಿಸಿದ್ದು, ರಷ್ಯಾ ತಕ್ಷಣವೇ ತನ್ನ ಆಕ್ರಮಣವನ್ನು ಸ್ಥಗಿತಗೊಳಿಸಿ, ಅಗ್ನಿಶಾಮಕ ದಳ ಹಾಗೂ ತುರ್ತು ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಅಣುಸ್ಥಾವರ ತಲುಪಲು ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕಾದ ಅಣು ಭದ್ರತಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಅಣು ಭದ್ರತಾ ಆಡಳಿತಕ್ಕೆ ಸೂಚನೆ ನೀಡಿದ್ದು, ಪರಿಸ್ಥಿತಿಯ ಮೇಲೆ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಇಂಗ್ಲೆಂಡ್ ಪ್ರಧಾನಿ ಬೋರಿಸ್, ಝೋಪೊರಿಜಜ್ಯಿ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ. ಕೂಡಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ ನಡೆಸಬೇಕು ಮತ್ತು ರಷ್ಯಾ ಅಧ್ಯಕ್ಷರ ಅಜಾಕರೂಕ ಕ್ರಮಗಳಿಂದ ಯೂರೋಪ್ ಭಾಗಕ್ಕೆ ಉಂಟಾಗಿರುವ ಬೆದರಿಕೆಗೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವದ ನಾಯಕರ ಮಧ್ಯ ಪ್ರವೇಶದ ಬಳಿಕ ರಷ್ಯಾ ಉಕ್ರೇನ್‍ನ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಲು ಅವಕಾಶ ನೀಡಿದ್ದು, ಬೆಂಕಿ ನಂದಿಸುವ ಕಾರ್ಯಚರಣೆ ಯಶಸ್ವಿಯಾಗಿದೆ. ವಿಶ್ವದ ಮೂರನೇ ಮಹಾಯುದ್ಧ ಅಣುದಾಳಿಯೊಂದಿಗೆ ಮುಗಿಯಲಿದೆ ಎಂದು ರಷ್ಯಾದ ಸಚಿವರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೆ, ಉಕ್ರೇನ್ ಅಣುಸ್ಥಾವರ ಮೇಲೆ ದಾಳಿ ನಡೆಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.
