ರಾಮನಗರ,ಜ.10- ವೀಕೆಂಡ್ ಕಫ್ರ್ಯೂ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಒಟ್ಟು 30 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ರಾಮನಗರ ಜಿಲ್ಲೆ ಸಾತನೂರು ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ 30 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸರ್ಕಾರದ ಕಾನೂನು ಉಲ್ಲಂಘನೆ ಮತ್ತು ಕೋವಿಡ್ ಮಾರ್ಗಸೂಚನೆಯನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಾತನೂರು ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ ಸೋಂಕು ನಿಯಂತ್ರಣದ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಎಲ್ಲ ಪ್ರತಿಭಟನೆ, ಪಾದಯಾತ್ರೆಯನ್ನು ನಿಷೇಧಿಸಿದೆ. ಹೀಗಿದ್ದರೂ ವೀಕೆಂಡ್ ಕಫ್ರ್ಯೂ ವೇಳೆ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಕ್ಕೆ ಎನ್‍ಡಿಎಂಎ ಕಾಯ್ದೆಯಡಿ ದೂರು ದಾಖಲಾಗಿದೆ.
ನಿನ್ನೆಯಷ್ಟೇ ಸಚಿವರ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಉಲ್ಲಂಘಿಸಿ ಪಾದಯಾತ್ರೆ ನಡೆಸುವವರ ಮೇಲೆ ಕಾನೂನು ಕ್ರಮ ಜರುಗಿಸುವ ಹೊಣೆಗಾರಿಕೆಯನ್ನು ರಾಮನಗರ ಜಿಲ್ಲಾಡಳಿತಕ್ಕೆ ನೀಡಿದ್ದರು. ಈಗಾಗಲೇ ರಾಮನಗರ ಜಿಲ್ಲಾಧಿಕಾರಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಭಟನೆ ನಡೆಸದಂತೆ ನೋಟಿಸ್ ಕೂಡ ನೀಡಿದ್ದರು. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್‍ನವರು ನಿನ್ನೆ ಪಾದಯಾತ್ರೆಯನ್ನು ಆರಂಭಿಸಿದ್ದರು.
ವೀಕೆಂಡ್ ಕಫ್ರ್ಯೂ ವೇಳೆ ಪಾದಯಾತ್ರೆ ಕೈಗೊಂಡಿದ್ದಕ್ಕೆ ಜನರಿಂದ ವ್ಯಾಪಕ ಟೀಕೆ ಕೇಳಿ ಬಂದಿದೆ. ಸಾಮಾನ್ಯ ಜನರು ರಸ್ತೆಗೆ ಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದವರ ಮೇಲೆ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿ ಸಾರ್ವಜನಿಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
