ವೆಲ್ಲಿಂಗ್ಟನ್,ಜ.20- ಪೆಸಿಫಿಕ್ ರಾಷ್ಟ್ರ ಟೊಂಗಾದಲ್ಲಿ ಭಾರಿ ಜ್ವಾಲಾಮುಖಿ ಸ್ಪೋಟಗೊಂಡ ನಂತರ ವಿಮಾನ ನಿಲ್ದಾಣದ ರನ್‍ವೇನಲ್ಲಿ ಉಂಟಾಗಿದ್ದ ಭಾರಿ ಬೂದಿಯ ರಾಶಿಯನ್ನು ತೆರವುಗೊಳಿಸಿದ ಬಳಿಕ ಶುದ್ಧ ನೀರು ಮತ್ತು ಇತರ ನೆರವಿನ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನ ಇಲ್ಲಿಂದ ಟೊಂಗಾಕ್ಕೆ ಹೊರಡಲು ಸಾಧ್ಯವಾಗಿದೆ.
ನೀರಿನ ಕಂಟೈನರ್‍ಗಳು, ತಾತ್ಕಾಲಿಕ ಷೆಲ್ಟರ್‍ಗಳು, ಜನರೇಟರ್‍ಗಳು, ಪೋಷಕಾಂಶ ಪೂರೈಕೆಗಳು ಮತ್ತು ಸಂವಹನ ಸಾಧನಗಳನ್ನು ಒಳಗೊಂಡ ಎಸಿ-130 ಹಕ್ರ್ಯುಲಿಸ್ ಮಿಲಿಟರಿ ಸಾರಿಗೆ ವಿಮಾನ ನ್ಯೂಜಿಲೆಂಡ್‍ನಿಂದ ಹೊರಟಿದೆ ಎಂದು ನ್ಯೂಜಿಲೆಂಡ್‍ನ ವಿದೇಶಾಂಗ ಸಚಿವರಾದ ನನಯ್ಲಾ ಮಾಹುತಾ ಹೇಳಿದ್ದಾರೆ.
ಆಸ್ಟ್ರೇಲಿಯಾ ಕೂಡ ಸಿ-17 ಗ್ಲೋಬ್‍ಮಾಸ್ಟರ್ ಸಾರಿಗೆ ವಿಮಾನವನ್ನು ಮಾನವೀಯ ನೆರವುಗಳಿಗಾಗಿ ಕಳುಹಿಸಿಕೊಟ್ಟಿದೆ. ಈ ವಿಮಾನಗಳು ಇಂದು ಮಧ್ಯಾಹ್ನ ಟೊಂಗಾ ತಲುಪುವ ನಿರೀಕ್ಷೆ ಇದೆ. ಟೊಂಗಾದಿಂದ ನೆರವಿನ ಮನವಿ ಇಲ್ಲದಿದ್ದರೂ ಈ ನೆರವು ವಿಮಾನಗಳನ್ನು ಕಳುಹಿಸಿಕೊಡಲಾಗಿದೆ. ಏಕೆಂದರೆ ವಿದೇಶಿಯರು. ದೇಶಕ್ಕೆ ಕೊರೊನಾ ವೈರಸ್ ತಂದು ಹಾಕುವುದು ಬೇಡ ಎಂದು ಟೊಂಗಾ ಹತಾಶಯತ್ನ ನಡೆಸಿದೆ.
ಟೊಂಗಾದಲ್ಲಿ ಕೋವಿಡ್-19ರ ಉಪಟಳ ಕಂಡು ಬಂದಿಲ್ಲ. ಕೊರೊನಾ ಸಾಂಕ್ರಾಮಿಕ ಪಿಡುಗು ಆರಂಭವಾಗದಾಗಿನಿಂದ ಇಲ್ಲಿ ಕೇವಲ ಒಂದೇ ಒಂದು ಪ್ರಕರಣ ವರದಿಯಾಗಿದೆ.
