ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

Social Share

ಬೆಂಗಳೂರು: ಕಾಡು ಕುದುರೆ ಓಡಿ ಬಂದಿತ್ತಾ..’ ಹಾಡಿನ ಮೂಲಕ ನಾಡಿನ ಮನೆಮಾತಾದ, ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಗುರುವಾರ ರಾತ್ರಿ 10.30 ರ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ, ಅವರಿಗೆ 83 ವರ್ಷ ವಯಸ್ಸಾಗಿತ್ತು.

ಇತ್ತೀಚಿಗೆ ಸುಬ್ಬಣ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲು ಆಯಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆಗ ಮಾರ್ಗಮಧ್ಯೆ ಆಂಬುಲೆನ್ಸ್ ನಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಸುಬ್ಬಣ್ಣ ಒಬ್ಬರಾಗಿದ್ದು, ಸುಬ್ಬಣ್ಣ ಅವರ ನಿಜ ನಾಮಧೇಯ ಜಿ.ಸುಬ್ರಹ್ಮಣ್ಯಂ. ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮಗನಾದ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದರು. ಸುಬ್ಬಣ್ಣ ಬಿ.ಎ., ಬಿ.ಕಾಂ., ಎಲ್.ಎಲ್.ಬಿ., ಪದವೀದರರು. ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆರಂಭದಲ್ಲಿ ಶಾಲಾ ಸಮಾರಂಭಗಳಲ್ಲಿ ಹಾಡುತ್ತಿದ್ದ ಸುಬ್ಬಣ್ಣ ಹಲವಾರು ಪ್ರಶಸ್ತಿ ಪಡೆದಿದ್ದರು. ಆ ಮೂಲಕ ಹಾಡಿನ ಸುಬ್ಬಣ್ಣ ಎಂದು ಖ್ಯಾತಿಗಳಿಸಿದ್ದರು.

ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ.

1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು. ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.

ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದರೆ, ಅಭಿಮಾನಿಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದಾರೆ. 1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ ‘ರಜತಕಮಲ್’ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು.

Koo App

“ಕಾಡು ಕುದುರೆ ಓಡಿ ಬಂದಿತ್ತಾ” ಎಂಬ ಹಾಡಿನ ಮೂಲಕ ಜನ ಮಾನಸದಲ್ಲಿ ಉಳಿದಂತ ಸುಗಮ ಸಂಗೀತ ಗಾಯಕ, ಹಿನ್ನಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಶ್ರೀ ಶಿವಮೊಗ್ಗ ಸುಬ್ಬಣ್ಣನವರ ಸಾವು ತೀವ್ರ ನೋವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ. ಓಂ ಶಾಂತಿ

Pralhad Joshi (@joshipralhad) 12 Aug 2022

Koo App

ಕನ್ನಡದ ಜನಪ್ರಿಯ ಸುಗಮ ಸಂಗೀತ ಗಾಯಕ, ಅಮೋಘ ಕಂಠಸಿರಿಯ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ‌ ನಿಧನ ತೀವ್ರ ದುಃಖದ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳಿಗೆ ಈ ನೋವು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ. 1979 ರಲ್ಲಿ ‘ಕಾಡುಕುದುರೆ’ ಚಿತ್ರದ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡಿಗೆ ಅವರಿಗೆ ರಜತ ಕಮಲ ರಾಷ್ಟ್ರಪ್ರಶಸ್ತಿ ದೊರಕಿತ್ತು. ಈ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗರೆಂಬ ಖ್ಯಾತಿಯನ್ನು ಅವರು ಗಳಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವಾರು ಗೌರವ ಅವರಿಗೆ ದೊರೆತಿದೆ. #ShimoggaSubba

Araga Jnanendra (@aragajnanendra) 12 Aug 2022

Koo App

ಕನ್ನಡ ಸುಗಮ ಸಂಗೀತ ಕ್ಷೇತ್ರದ ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಹಾಡುಗಳನ್ನು ಆಲಿಸುತ್ತಾ ಬೆಳೆದವರು ನಾವು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅಭಿಮಾನಿಗಳು, ಹಿತೈಷಿಗಳು, ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ. ಓಂ ಶಾಂತಿ.

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 12 Aug 2022

Koo App

ಖ್ಯಾತ ಗಾಯಕ ಹಾಗೂ ವಕೀಲರಾಗಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರು ಹೃದಯಾಘಾತದಿಂದ ವಿಧಿವಶರಾಗಿರುವ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ತಮ್ಮ ಅದ್ಭುತ ಕಂಠದ ಮೂಲಕ ಅವರು ಹೆಸರುವಾಸಿಯಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. @BJP4Karnataka

Dr. Murugesh R Nirani (@murugesh_nirani) 12 Aug 2022

Koo App

“ಕಾಡು ಕುದುರೆ ಓಡಿ ಬಂದಿತ್ತಾ..” ಹಾಡಿನ ಮೂಲಕ ನಾಡಿನ ಮನೆಮಾತಾದ, ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆಯಿಂದ ಸುಗಮ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸುಬ್ಬಣ್ಣನವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ, ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. #ShivamoggaSubbanna #RIP

Dr. Narayana Gowda / ಡಾ.ನಾರಾಯಣ ಗೌಡ (@narayanagowdakc) 12 Aug 2022

Articles You Might Like

Share This Article