ಪಿಎಚ್‍ಡಿ ಮಾಡುತ್ತಿರುವ ರಾಜ್ಯದ ಮೊದಲ ತೃತೀಯ ಲಿಂಗಿ ದೀಪು

Social Share

ಚಾಮರಾಜನಗರ,ಜ.31- ತೃತೀಯ ಲಿಂಗಿಯೊಬ್ಬರು ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗುವ ಮೂಲಕ ಈ ಸಮುದಾಯದಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ವಾಸವಿರುವ ದೀಪು ಬುದ್ದೆ ತಾನು ತೃತೀಯ ಲಿಂಗಿ ಎಂದೇ ಘೋಷಿಸಿಕೊಂಡು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿಯೇ ಇವರು ಪಿಎಚ್‍ಡಿ ಮಾಡುತ್ತಿದ್ದಾರೆ.
ಇವರು ರಾಜ್ಯದಲ್ಲೇ ಲಿಂಗತ್ವ ಅಲ್ಪಸಂಖ್ಯಾತರಾಗಿ ಪಿಎಚ್‍ಡಿ ಮಾಡುತ್ತಿರುವ ಮೊದಲಿಗರಾಗಿ ದ್ದಾರೆ. ದೀಪು ಬುದ್ದೆ ಎಂಬ ಮಹಿಳೆ ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗುವ ಮೂಲಕ ಸಮುದಾಯದ ಜನರಲ್ಲಿ ಹೊಸ ಭರವಸೆಗೆ ಕಾರಣರಾಗಿದ್ದಾರೆ.
ಆಂತರ್ಯದಲ್ಲಿ ಹೆಣ್ಣಿನ ಭಾವನೆ ಇಟ್ಟುಕೊಂಡು ಬಹಿರಂಗ ವಾಗಿ ಗಂಡಾಗಿ ಕೆಲವರು ಪಿಎಚ್‍ಡಿ ಮಾಡಿದ್ದರು. ದೀಪು ಬುದ್ದೆ ಮಾತ್ರ ಲಿಂಗಿತ್ವ ಅಲ್ಪಸಂಖ್ಯಾತೆಯಾಗಿಯೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಸ್ನಾತಕೋತ್ತರ ಪದವಿ ಜೊತೆಗೆ ಪಿಎಚ್‍ಡಿ ಮಾಡುತ್ತಿರುವವರಲ್ಲಿ ರಾಜ್ಯದಲ್ಲಿ ಮೊದಲಿಗರಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಸರ್ಕಾರಿ ದಾಖಲಾತಿಗಳಲ್ಲಿ ಪ್ರವೇಶ ಪಡೆದು ಸಂಶೋಧನಾ ವಿದ್ಯಾರ್ಥಿನಿಯಾಗಿರುವವರಲ್ಲಿ ದೀಪು ಬುದ್ದೆ ಮೊದಲಿಗರಾಗಿದ್ದು, ಕೆಲವೇ ವರ್ಷಗಳಲ್ಲಿ ಡಾಕ್ಟರೇಟ್ ಪದವಿ ಕೂಡ ಪಡೆಯಲಿದ್ದಾರೆ.
ಇವರ ಸಮುದಾಯದವರ ಬಗ್ಗೆಯೇ ಇವರು ಪಿಎಚ್‍ಡಿ ಮಾಡುತ್ತಿರುವುದು ಮತ್ತೊಂದು ವಿಶೇಷ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮತ್ತು ಹೋರಾಟಗಳು ಒಂದು ವಿಮಾರ್ಶಾತ್ಮಕ ಅಧ್ಯಯನ ಎಂಬ ವಿಷಯ ಕುರಿತು ಡಾ.ಸೋಮಶೇಖರ್ ಮಾರ್ಗದರ್ಶನದಲ್ಲಿ 7 ತಿಂಗಳಿನಿಂದ ಸಂಶೋಧನೆ ಮಾಡುತ್ತಿದ್ದಾರೆ.
ವಿದ್ಯಾರ್ಥಿಯಾಗಿ ಓದುವಾಗಿನ ಸಮಸ್ಯೆಗಳು, ಸಮಾಜ ನೋಡುವ ರೀತಿ, ಪರಿವರ್ತನಾ ಮಹಿಳೆಯರ ಪರಿಸ್ಥಿತಿ, ಸಮುದಾಯ ವ್ಯಕ್ತಿಗಳ ಹೋರಾಟ, ಬದುಕಿನ ಬಗ್ಗೆ ತೌಲನಿಕ ಅಧ್ಯಯನ ನಡೆಸುತ್ತಿದ್ದು, ಇವರು ಓದುವ ಛಲಕ್ಕೆ ಪರಿವರ್ತನಾ ಮಹಿಳೆಯರು, ಮೈಸೂರು ವಿವಿ ಪ್ರಾಧ್ಯಾಪಕರು ಬೆಂಬಲ ನೀಡುತ್ತಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ ಗ್ರಾಮದವರಾದ ದೀಪು ಬುದ್ದೆ 8ನೇ ತರಗತಿಯಲ್ಲಿ ತಾನು ಹೆಣ್ಣು ಎಂಬ ಭಾವನೆ ಬಂದರೂ ಅದನ್ನು ಅದುಮಿಟ್ಟು ಗುರುಸ್ವಾಮಿ ಎಂಬ ಹುಡುಗನಾಗಿಯೇ ಪಿಯುಸಿವರೆಗೆ ಓದಿದರು.
ಬಳಿಕ ಹೆಣ್ಣೆಂಬ ಭಾವನೆ ಮತ್ತಷ್ಟು ಗಟ್ಟಿಯಾದ್ದರಿಂದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದಲ್ಲಿ ಗುರುತಿಸಿಕೊಂಡರು. ಆದರೆ ಸಮಾಜದಲ್ಲಿ ಗುರುಸ್ವಾಮಿಯಾಗಿಯೇ ಉಳಿದಿದ್ದರು. ಪದವಿಯನ್ನು ಹುಡುಗ ಎಂದೇ ಮಾಡಿ ಕೊನೆಗೆ ತಾನು ಹೆಣ್ಣು ಎಂದು ಸಮಾಜದ ಮುಂದೆ ತೋರ್ಪಡಿಸಿಕೊಂಡರು. ಕೀಳರಿಮೆ, ಮಾನಸಿಕ ಒತ್ತಡಗಳಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಭಿಕ್ಷಾಟನೆಗೆ ಇಳಿದರು.
ತೃತೀಯ ಲಿಂಗಿಯಾಗಿ ಎಂಎ ಪದವಿ ಪಡೆದ ಮೊದಲಿಗರು:
ಆಗಾಗ ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಓದುತ್ತಿದ್ದರಿಂದ ಪ್ರೇರಣೆಗೊಂಡ ಇವರು ಮೈಸೂರು ವಿವಿಯಲ್ಲಿ ಕನ್ನಡ ಎಂಎ ಪದವಿಯನ್ನು ತೃತೀಯ ಲಿಂಗಿಯಾಗಿಯೇ 2018-20ರ ಸಾಲಿನಲ್ಲಿ ಪಡೆಯುವ ಮೂಲಕ ತೃತೀಯ ಲಿಂಗಿ ಎಂದು ಸರ್ಕಾರಿ ದಾಖಲೆಗಳಲ್ಲಿ ಹೆಸರಿಸಿಕೊಂಡು ಓದಿದ ಮೊದಲಿಗರಾಗಿದ್ದಾರೆ.
ಆರಂಭದಲ್ಲಿ ಗಂಡು ಮತ್ತು ಹೆಣ್ಣು ಎರಡು ಕಾಲಂ ಇದ್ದುದ್ದರಿಂದ ಹೋರಾಡಿ ತನ್ನನ್ನು ಲಿಂಗತ್ವ ಅಲ್ಪಸಂಖ್ಯಾತರಡಿಯಲ್ಲೇ ದಾಖಲಿಸಬೇಕೆಂದು ಪಟ್ಟು ಹಿಡಿದು ಅದೇ ರೀತಿ ಶೇ.80ರ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ.
ಪಿಎಚ್‍ಡಿ ಮಾಡುತ್ತಿರುವ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಸರ್ಕಾರ ನಮ್ಮಂತವರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ದೀಪು ಬುದ್ದೆ ಅವರ ಒತ್ತಾಸೆಯಾಗಿದೆ.

Articles You Might Like

Share This Article