ಕುಖ್ಯಾತ ಕಾರುಗಳ್ಳ ಸೇರಿ ಮೂವರ ಬಂಧನ, 16 ಐಷಾರಾಮಿ ಕಾರುಗಳ ವಶ

Social Share

ಬೆಂಗಳೂರು,ಅ.15-ನಗರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸೆಕೆಂಡ್ ಹ್ಯಾಂಡ್ ಹಾಗೂ ಕಳುವಾಗಿದ್ದ ಐಷಾರಾಮಿ ಕಾರುಗಳನ್ನು ಖರೀದಿಸಿ ಅವುಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ಕುಖ್ಯಾತ ಕಾರುಗಳ್ಳ ಸೇರಿದಂತೆ ಮೂವರನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿ ಐದು ಕೋಟಿ ರೂ. ಮೌಲ್ಯದ 16 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಜಿಹಳ್ಳಿಯ ವಿನೋಭನಗರ ನಿವಾಸಿ ಜಾಬೀರ್ ಷರೀಫ್ (30), ವಸಂತನಗರದ ಮನೀಷ್ (33) ಮತ್ತು ಬೆಳಗಾವಿ ಜಿಲ್ಲೆಯ ಮಾರುತಿನಗರ ನಿವಾಸಿ ಇಮಾಮ್ (23) ಬಂಧಿತ ವಂಚಕರು. ಪ್ರಮುಖ ಆರೋಪಿ ಜಾಬೀರ್ ಷರೀಫ್ ಕುಖ್ಯಾತ ಕಾರುಕಳ್ಳನಾಗಿದ್ದು, ನವದೆಹಲಿಯಲ್ಲಿ ನಾಲ್ಕು ಕಾರುಗಳನ್ನು ಕಳ್ಳತನ ಮಾಡಿದ್ದಾನೆ. ಇನ್ನಿಬ್ಬರು ಆರೋಪಿಗಳು ಕಾರು ಡೀಲರ್ಗಳು.

ಕೆಜಿಹಳ್ಳಿ ನಿವಾಸಿ ಜಾಬೀರ್ ಷರೀಫ್ ಮತ್ತು ಆತನ ಸ್ನೇಹಿತರು ಇನೋವಾ ಕ್ರಿಷ್ಟಾ ಕಾರನ್ನು ಖರೀದಿಸಿ ಅದರ ನಂಬರ್ ಪ್ಲೇಟ್ ಬದಲಾಯಿಸಿ ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡಿದ್ದಾರೆಂದು
ವಸಂತ್ಕುಮಾರ್ ಎಂಬುವರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕರಿಗಾಗಿ ಶೋಧ ನಡೆಸುತ್ತಿದ್ದರು. ಆರೋಪಿಗಳ ಪತ್ತೆಗಾಗಿ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಎಸ್.ಗುಳೇದ ಅವರ ಮಾರ್ಗದರ್ಶನದಲ್ಲಿ ಪುಲಕೇಶಿನಗರದ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.

ಅದರಂತೆ ಪುಲಕೇಶಿನಗರ ಠಾಣೆ ಇನ್ಸ್ಪೆಕ್ಟರ್ ಕಿರಣ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ತಾಂತ್ರಿಕವಾಗಿ ಮತ್ತು ಗ್ರೌಂಡ್ ವರ್ಕ್ ತನಿಖೆ ಮೂಲಕ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳು ನಗರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದರು. ಅಲ್ಲದೆ, ಕಳುವಾದ ಕಾರುಗಳನ್ನು ಖರೀದಿಸಿ ಅವುಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸಿ ಮಾರಾಟ ಮಾಡಿ ವಂಚಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳಿಂದ 16 ವಿವಿಧ ಕಂಪೆನಿಯ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ತಂಡದ ಕಾರ್ಯವೈಖರಿಯನ್ನು ಡಿಸಿಪಿ ಭೀಮಾಶಂಕರ ಗುಳೇದ್ ಅವರು ಪ್ರಶಂಶಿಸಿದ್ದಾರೆ.

Articles You Might Like

Share This Article