ಮಾರಕಾಸ್ತ್ರಗಳನ್ನು ಹಿಡಿದು ಗ್ರಾಮಸ್ಥರನ್ನು ಬೆದರಿಸಿದ್ದ ಆರೋಪಿಗಳ ಬಂಧನ

ಥಾಣೆ, ಮೇ 7- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಹಿಸರ್ ಮೋರಿ ಮತ್ತು ಠಾಕೂರ್ಪಾದ ಗ್ರಾಮಗಳ ನಿವಾಸಿಗಳನ್ನು ಕತ್ತಿ ಮತ್ತು ಕೊಡಲಿಯಂತಹ ಆಯುಧಗಳನ್ನು ಹಿಡಿದು ಭಯಭೀತಗೊಳಿಸಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ 12.15 ರಿಂದ 3.45 ರ ನಡುವೆ ಆರೋಪಿಗಳು ಕೈಯಲ್ಲಿ ಕತ್ತಿಗಳು, ಕೊಡಲಿಗಳನ್ನು ಹಿಡಿದುಕೊಂಡು ಸ್ಥಳೀಯ ನಿವಾಸಿಗಳನ್ನು ಭಯಭೀತಗೊಳಿಸಿದರು. ಯಾವುದೇ ಕಾರಣವಿಲ್ಲದೆ ಹಲವಾರು ಮನೆಗಳ ಬಾಗಿಲುಗಳನ್ನು ಬಡಿದು, ನಿವಾಸಿಗಳಿಗೆ ಬೆದರಿಕೆ ಹಾಕಿದರು. ಜನರಲ್ಲಿ ಭೀತಿ ಹರಡಿತು ಎಂದು ಶಿಲ್ ದೈಘರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಕೆಲವು ನಿವಾಸಿಗಳು ಧೈರ್ಯ ಮಾಡಿ ಒಗ್ಗಟ್ಟಾಗಿ ಆರೋಪಿಗಳನ್ನು ಹಿಡಿದಿದ್ದಾರೆ. ಬಂತರನ್ನು ವೇದ್ ಸಲೀಂ ಶೇಖ್, ದಿಲಾವರ್ ಫರೀದ್ ಶೇಖ್, ಸಾಹಿದ್ ನಸೀರ್ ಶೇಖ್, ಸಾದ್ ಅಹ್ಮದ್ ಮತ್ತು ಮರಿಯಾ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 143 (ಕಾನೂನುಬಾಹಿರವಾಗಿ ಗುಂಪು ಸೇರುವುದು), 147 (ಗಲಭೆ),  148 (ಮಾರಣಾಂತಿಕ ಆಯುಧದಿಂದ ಶಸ್ತ್ರಸಜ್ಜಿತರಾಗಿರುವುದು), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ), ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗುಂಪಿನಲ್ಲಿ ಇನ್ನೂ ಕೆಲವು ವ್ಯಕ್ತಿಗಳಿದ್ದು, ಅವರನ್ನು ಬಂಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ, ಅವರ ಕೃತ್ಯದ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.