ಬೆಂಗಳೂರು, ಮಾ.23- ರಿಯಲ್ ಎಸ್ಟೇಟ್ ಉದ್ಯಮಿ ಲೋಕ್‌ನಾಥಸಿಂಗ್ (37) ಅವರನ್ನು ಕೊಲೆಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಐದು ವಿಶೇಷ ತಂಡಗಳನ್ನ ರಚಿಸಲಾಗಿದೆ. ಈ ಕೊಲೆ ಹೆಣ್ಣು ಅಥವಾ ಹಣಕಾಸು ವಿಚಾರದಲ್ಲಿ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಪರಾರಿಯಾಗಿರುವ ದುಷ್ಕರ್ಮಿಗಳ ಸೆರೆಗೆ ಬಲೆ ಬೀಸಿದ್ದಾರೆ. ಮಾಗಡಿ ತಾಲೂಕಿನ ಕುದೂರುಮೂಲದ ಲೋಕ್‌ನಾಥಸಿಂಗ್ ಎಂಬುವರೇ ಕೊಲೆಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ. ನಿನ್ನೆ ಸಂಜೆ 5ಗಂಟೆ ಸುಮಾರಿನಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನ ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಬಳಿ ತನ್ನ ಸ್ನೇಹಿತರ ಜೊತೆ ಕಾರಿನಲ್ಲಿ ಬಂದು ಮದ್ಯಸೇವಿಸುತ್ತಿದ್ದನು.
ಆ ಸಂದರ್ಭದಲ್ಲಿ ಜಗಳ ಉಂಟಾಗಿ ಆರೋಪಿಗಳು ಇವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಂಡು ನಿರ್ಮಾಣದ ಹಂತದ ಕಟ್ಟಡಕ್ಕೆ ಓಡಿ ಹೋದರು ಸಹ ದುಷ್ಕರ್ಮಿಗಳು ಬೆನ್ನಹಟ್ಟಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.