ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪನೆಗೆ ಇಚ್ಛಾಶಕ್ತಿ ಕೊರತೆ

Spread the love

ಬೆಂಗಳೂರು, ಮೇ28- ನಾಡಪ್ರಭು ಕೆಂಪೇಗೌಡರ ಇತಿಹಾಸ, ಆಡಳಿತ, ಅವರು ನೀಡಿದ ಕೊಡುಗೆಗಳನ್ನು ನಾಡಿನ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಿರುವ ಕೆಂಪೇಗೌಡ ಅಧ್ಯಯನ ಕೇಂದ್ರವು ಶಂಕುಸ್ಥಾಪನೆಗಷ್ಟೇ ಸೀಮಿತವಾಗಿದ್ದು ಯೋಜನೆ ನೆನೆಗುದಿಗೆ ಬಿದ್ದಿದೆ.

2017ರಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು, ಅದಾದ ನಂತರ ಮೂರು ಸರ್ಕಾರಗಳು ಬಂದವು, ನಾಲ್ಕು ಮುಖ್ಯಮಂತ್ರಿಗಳು ಬಂದರೂ ಯೋಜನೆ ಕೈಗೆತ್ತಿಕೊಳ್ಳಲೇ ಇಲ್ಲ. ಜ್ಞಾನಭಾರತಿ ಆವರಣದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿ ಸಹಯೋಗದಲ್ಲಿ ಅಧ್ಯಯನ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ ಅನುಷ್ಛಾನಗೊಳಿಸಲು ಅಂದಿನ ಸರ್ಕಾರದಲ್ಲಿದ್ದ ಒಕ್ಕಲಿಗ ಸಚಿವರು ಮುಂದಾದರೂ ಸಾಧ್ಯವಾಗಲಿಲ್ಲ,. ಜೂ.27ರಂದು ಕೆಂಪೇಗೌಡ ಜಯಂತಿ ಆಚರಣೆ ನಡೆಯಲಿದೆ. ಆ ವೇಳೆಗೆ ವಿಷಯ ಮತ್ತೆ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಅಧ್ಯಯನ ಕೇಂದ್ರದ ಆಕರ್ಷಣೆಯಾಗಿ ಕೆಂಪೇಗೌಡರ ಕಾಲದ ಶಾಸನಗಳು, ಶಿಲ್ಪಕಲೆ, ಗೋಪುರಗಳು, ದೇವಸ್ಥಾನ, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ 16ನೇ ಶತಮಾನದ ನಗರವನ್ನು ಮರುಸೃಷ್ಟಿಸುವ ಗುರಿ ಹೊಂದಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಇತಿಹಾಸ, ಆಡಳಿತ ಮತ್ತು ಕೊಡುಗೆಗಳ ಸಂಪೂರ್ಣ ಮಾಹಿತಿ ಸಿಗಬೇಕು ಎಂಬುದು ಅಧ್ಯಯನ ಕೇಂದ್ರದ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆ ನಿಂತಲ್ಲೇ ನಿಂತಿರುವುದರಿಂದ ಯೋಜನೆ ಜಾರಿಗೆ ಅಡ್ಡಿಯಾಗಿದೆ.

2017ರ ಸೆಪ್ಟೆಂಬರ್‍ನಲ್ಲಿ ಆದಿಚುಂಚುನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಶಂಕುಸ್ಥಾಪನೆ ನೆರವೇರಿಸಿದರು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನ ಕೇಂದ್ರವಿದೆ. ಆದರೆ ಸ್ವಂತ ಕಟ್ಟಡವಿಲ್ಲ, ಬದಲಾಗಿ ಬೇರೆ ಇಲಾಖೆಯಿಂದ ಕೆಲಸ ಮಾಡುತ್ತಿದೆ.

ಜ್ಞಾನಭಾರತಿ ಆವರಣದಲ್ಲಿ 3 ಎಕರೆ ಜಾಗ ಕೂಡ ನಿಗದಿ ಮಾಡಲಾಗಿದೆ, ಇದಕ್ಕಾಗಿ 50 ಕೋಟಿ ಹಣ ಕೂಡ ಮಂಜೂರು ಮಾಡಲಾಗಿದೆ. ಬೆಂಗಳೂರು ಮೂಲದ ಕಂಪನಿಯೊಂದು ಕೆಂಪೇಗೌಡ ಅಧ್ಯಯನ ಕೇಂದ್ರದ ವಿನ್ಯಾಸ ರೂಪಿಸಿದ್ದು ಅದಕ್ಕೆ ಅನುಮೋದನೆ ದೊರೆತಿದೆ.

2021ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಪೂಜೆ ಸಲ್ಲಿಸಿತ್ತು. ಬಿಬಿಎಂಪಿ ಎರಡು ಬಾರಿ ಟೆಂಡರ್ ಕರೆದಿತ್ತು ಮತ್ತು ಅಂತಿಮವಾಗಿ 2021 ರಲ್ಲಿ ಬೆಂಗಳೂರು ಮೂಲದ ಕಂಪನಿಯನ್ನು ಬಿಡ್ಡರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಇಂದಿಗೂ ಕಾರ್ಯಾದೇಶ ನೀಡಿಲ್ಲ.

Facebook Comments