ಬೆಂಗಳೂರು, ಜು.13- ಎಫ್‍ಕೆಸಿಸಿಐನಿಂದ ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಜಿಲ್ಲಾ ಮಟ್ಟದ ವಾಣಿಜ್ಯ ಸಮ್ಮೇಳನವನ್ನು ಇದೇ 16,17ರಂದು ಆಯೋಜಿಸಿ ರುವುದಾಗಿ ಎಫ್‍ಕೆಸಿಸಿಐ ಅಧ್ಯಕ್ಷ ಡಾ.ಸಿ.ಎ.ಐ.ಎಸ್. ಪ್ರಸಾದ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ಲೋಬಲ್ ಇನ್ವೆಸ್ಟ್‍ರ್‍ಮೀಟ್‍ಗೆ ಪೂರಕವಾಗುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸುವರು.
ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ- ನವ ಕರ್ನಾಟಕ ಎಂಬ ಘೋಷ ವಾಕ್ಯದೊಂದಿಗೆ ನಡೆಯುವ ವಿಶೇಷ ಅಧಿವೇಶನದಲ್ಲಿ ಹೊಸ ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯಗಳು ಹಾಗು ವಿವಿಧ ಪ್ರಖ್ಯಾತ ಕಂಪನಿಗಳ ಹೂಡಿಕೆ ಸಾಧ್ಯತೆಯಂತಹ ಮಹತ್ವದ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.
17ರಂದು ಅವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜವಳಿ ಮತ್ತು ಕೈಗಾರಿಕಾ ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ ಭಾಗವಹಿಸಲಿದ್ದಾರೆ.
ಅಮೆಜಾನ್ ಕಂಪನಿಯ ಹಿರಿಯ ಅಕಾರಿಗಳೂ ಈ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳ ಬಗ್ಗೆ, ಭಾರತೀಯ ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಕೆ.ಉಲ್ಲಾಸ್ ಕಾಮತ್ ಅವರು ಕ್ಲಸ್ಟರ್ ಆಧಾರಿತ ಉದ್ದಿಮೆಗಳು ಹಾಗೂ ಹೊಸ ಬಂಡವಾಳ ಹೂಡಿಕೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಸಮ್ಮೇಳನದಲ್ಲಿ ಕೃಷಿ ಕ್ಷೇತ್ರದಲ್ಲಿ ಮುಂದಿನ ಭವಿಷ್ಯ, ಇಂಧನ ಮರುಬಳಕೆ ಕುರಿತಂತೆ ಚರ್ಚೆ, ಇ- ಕಾಮರ್ಸ್‍ನಲ್ಲಿ ಬಂಡವಾಳ
ಹೂಡಿಕೆ, ಸಣ್ಣ ಕೈಗಾರಿಕೆಗಳ ಉನ್ನತೀಕರಣ ಕುರಿತಂತೆ ಚರ್ಚೆಗಳು ನಡೆಯಲಿವೆ.