ಟೆಹರಾನ್, ಜು.23- ಇರಾನ್‍ನ ಬರಪೀಡಿತ ದಕ್ಷಿಣ ಫಾರ್ಸ್ ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ದೂರದರ್ಶನ ವರದಿ ಮಾಡಿದೆ.
ನಗರದ ಗವರ್ನರ್ ಯೂಸೆಫ್ ಕರೇಗಾರ್ ಪ್ರಕಾರ, ಭಾರೀ ಮಳೆಯಿಂದಾಗಿ ಎಸ್ತಾಬಾನ್ ನಗರದ ರೌಡ್ಬಾಲ್ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಹಠಾತ್ ಪ್ರವಾಹದಲ್ಲಿ ಸಿಲುಕಿದ್ದ 55 ಜನರನ್ನು ರಕ್ಷಣಾ ತಂಡಗಳು ರಕ್ಷಿಸಿವೆ, ಆದರೆ ಕನಿಷ್ಠ ಆರು ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇರಾನ್‍ನ ಹವಾಮಾನ ಇಲಾಖೆ ದೇಶಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ದಶಕಗಳಿಂದ ಬರಗಾಲ ಎದುರಿಸುತ್ತಿರುವ ಪ್ರದೇಶಗಳಲ್ಲಿ ಋತುಮಾನ ಬದಲಾವಣೆಯಿಂದ ಬಾರೀ ಮಳೆ ಅನಿರೀಕ್ಷಿತ ಅಪಾಯ ತಂದೊಡ್ಡಿದೆ.
ನದಿಪಾತ್ರಗಳು ಹಾಗೂ ರಸ್ತೆಯ ಇಕ್ಕೆಲೆಗಳಲ್ಲಿ ಕಟ್ಟಡಗಳು ಮತ್ತು ವ್ಯಾಪಕ ನಿರ್ಮಾಣದಿಂದ ಪ್ರವಾಹದ ಅಪಾಯಗಳು ಉಲ್ಬಣಗೊಂಡಿವೆ. 2018ರ ಮಾರ್ಚ್‍ನಲ್ಲಿ ಫಾರ್ಸ್ ಪ್ರಾಂತ್ಯದಲ್ಲಿ ಹಠಾತ್ ಪ್ರವಾಹದಿಂದ 44 ಜನ ಸಾವನ್ನಪ್ಪಿದ್ದರು.