ಬೆಂಗಳೂರು,ಸೆ.1- ನಗರದಲ್ಲಿ ಈ ಹಿಂದೆ ಗುರುತಿಸಲಾಗಿದ್ದ ಮಳೆ ಅನಾಹುತ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲೂ ಪ್ರವಾಹ ಉಂಟಾದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆ ನಗರದ 209 ಮಳೆ ಹಾನಿ ಪ್ರದೇಶಗಳನ್ನು ಬಿಬಿಎಂಪಿ ಗುರುತು ಮಾಡಿತ್ತು. ಆದರೆ, ಈ ಬಾರಿ ಹೊಸ ಪ್ರದೇಶ ಗಳಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಇತ್ತಿಚೆಗೆ ಬಿದ್ದ ರಣ ಮಳೆಯಿಂದಾಗಿ ನಗರದಲ್ಲಿರುವ ಹಲವಾರು ಕೆರೆ ಕುಂಟೆಗಳು ಉಕ್ಕಿ ಹರಿದಿರೋದೇ ಪ್ರವಾಹಕ್ಕೆ ಪ್ರಮುಖ ಕಾರಣ ಎಂದು ಪತ್ತೆ ಹಚ್ಚಲಾಗಿದೆ.ಬೆಳ್ಳಂದೂರು, ವರ್ತೂರು, ನಲ್ಲೂರಹಳ್ಳಿ ಕೆರೆಗಳು ಉಕ್ಕಿ ಹರಿದ ಪರಿಣಾಮ ಮಾರತಹಳ್ಳಿ, ಸರ್ಜಾಪುರ , ಹೊರ ವರ್ತುಲ ರಸ್ತೆ, ಬೆಳ್ಳಂದೂರು ಭಾಗದಲ್ಲಿ ಬಾರಿ ಪ್ರವಾಹ ಕಂಡು ಬಂದಿತ್ತು.
ಈಭಾಗದಲ್ಲಿ ರಾಜಕಾಲುವೆ ಒತ್ತುವರಿ ಹಾಗೂ ಕೆರೆ ಒತ್ತುವರಿ ಬಗ್ಗೆ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದ್ದರಿಂದಲೇ ರಾಜಕಾಲುವೆಗಳು ಹಾಗೂ ಕೆರೆಗಳು ಒತ್ತುವರಿಯಾದದ್ದೆ ಪ್ರವಾಹಕ್ಕೆ ಮತ್ತೊಂದು ಕಾರಣವಾಗಿದೆ.ಕೆರೆಯಿಂದ ಹೊರ ಹೋಗುವ ನಾಲೆಗಳನ್ನು ಒತ್ತುವರಿ ಮಾಡಿರುವುದರಿಂದ ನಾಲೆಗಳು ಕಿರಿದಾಗಿರುವುದರಿಂದ ಭಾರಿ ಮಳೆಯಿಂದ ಹರಿದ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ತಗ್ಗುಪ್ರದೇಶಗಳಲ್ಲಿರುವ ಅಪಾರ್ಟ್ಮೆಂಟ್ಗಳು ಹಾಗೂ ಮನೆಗಳಿಗೆ ನುಗ್ಗುವಂತಾಗಿದೆ.
ಕಳೆದ ಒಂದು ತಿಂಗಳಿನಲ್ಲಿ ನಗರದ ಭಾರಿ ಮಳೆಯಾಗಿದೆ. ಈವರೆಗೆ 364.2 ಮಿಲಿ ಮೀಟರ್ನಷ್ಟು ಮಳೆಯಾಗಿದ್ದು, ಇದು 1998 ರ ಬಳಿಕ ದಾಖಲೆಯ ಮಳೆಯಾಗಿರುವುದು ವಿಶೇಷ.ಕಳೆದ ತಿಂಗಳು ಸುರಿದ ಭಾರಿ ಮಳೆ, ರಾಜಕಾಲುವೆ, ಕೆರೆ ಕುಂಟೆಗಳ ಒತ್ತುವರಿ ಯಿಂದಾಗಿಯೇ ಈ ಬಾರಿ ಇದುವರೆಗೂ ಪ್ರವಾಹಕ್ಕೆ ಸಿಲುಕದ ಪ್ರದೇಶಗಳಲ್ಲೂ ಪ್ರವಾಹ ಸೃಷ್ಟಿಯಾಗಲು ಕಾರಣವಾಗಿದೆ.
ಮಾನ ಹರಾಜು:
ನಗರದಲ್ಲಿ ಸಂಭವಿಸಿರುವ ಮಳೆ ಅನಾಹುತಗಳಿಂದಾಗಿ ಸಿಲಿಕಾನ್ ಸಿಟಿಯ ಮಾನ ಹರಾಜಾಗಿದೆ.ಬೆಳ್ಳಂದೂರು ಕೆರೆ ಕೊಡಿ ಹೊಡೆದ ಪರಿಣಾಮ ಅಲ್ಲಿನ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತಿದೆ. ಇದರಿಂದಾಗಿ ಐಟಿ ಬಿಟಿ ಸಿಟಿಯ ರೋಡ್ ಅಕ್ಷರಶಃ ಕೆರೆಯಂತಾಗಿ ಪರಿಣಮಿಸಿದೆ.ರಸ್ತೆಗಳಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿರುವುದರಿಂದ ಬೈಕ್ಗಳು ಸ್ಟಾರ್ಟ್ ಆಗದೆ ದ್ವಿಚಕ್ರ ವಾಹನ ಸವಾರರು ರಸ್ತೆಗಳಲ್ಲಿ ಪರದಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಮನೆಗಳಿಗೆ ನೀರು:
ವರುಣಾರ್ಭಟ ದಿಂದಾಗಿ ಬೆಳ್ಳಂದೂರು ರಸ್ತೆಗಳು ಕೆರೆಯಂತಾಗಿದ್ದು ಸುತ್ತಮುತ್ತಲಿನ ನೂರಾರು ಮನೆಗಳಿಗೆ ಹಾಗೂ ಅಪಾರ್ಟ್ ಮೆಂಟ್ಗಳಿಗೆ ನೀರು ನುಗ್ಗಿದೆ. ಇದರ ಜೊತೆಗೆ ಐವತ್ತಕ್ಕೂ ಹೆಚ್ಚು ಮನೆ, ಶೆಡ್ಗಳಿಗೆ ಹೋಗಲು ರಸ್ತೆಗಳೆ ಇಲ್ಲದಂತಾಗಿದೆ.
ತಮ್ಮ ಅಗತ್ಯ ವಸ್ತುಗಳಿಗಾಗಿ ಅಲ್ಲಿನ ಜನ ಟ್ರಾಕ್ಟರ ಮೊರೆ ಹೋಗಿದ್ದಾರೆ. ಕಳೆದೆರಡು ದಿನದಿಂದ ಮಳೆ ನೀರು ಪ್ರಮಾಣ ಕಡಿಮೆಯಾಗ್ತಿಲ್ಲ. ರಸ್ತೆಯಲ್ಲಿ ಐದು ಅಡಿಯಷ್ಟು ನಿಂತಿದೆ.
ಮಹದೇವಪುರ ವಲಯದಲ್ಲಿ ನಿಲ್ಲದ ಪ್ರವಾಹ:
ಪ್ರತಿಷ್ಟಿತ ಬಡಾವಣೆಗೆ ಈಗಲೂ ಹರಿದುಬರುತ್ತಿರುವ ಕೆರೆ ಮಳೆ ನೀರು
ಆಲನಾಯಕನ ಕೆರೆಯಿಂದ ಈಗಲೂ ಹರಿದು ಬರುತ್ತಿದೆ ಮಳೆ ನೀರಿನಿಂದ ದೊಡ್ಡಕ್ಕನಹಳ್ಳಿಯಲ್ಲಿರುವ ಪ್ರತಿಷ್ಟಿತ ರೈನ್ಬೋ ಡ್ರೈವ್ ಲೇಔಟ್ ಗೆ ಮಳೆ ನೀರು ಹರಿದುಬರುತ್ತಲೆ ಇದೆ. ಲೇಔಟ್ ಒಳಗಡೆ ಹೋಗಲು, ಹೊರ ಬರಲು ಟ್ರಾಕ್ಟರ್ ಬಳಕೆ ಮಾಡಲಾಗುತ್ತಿದೆ.
ಎಟಿಎಂ ಸ್ಥಬ್ದ: ರೇನ್ ಬೋ ಲೇಔಟ್ ನಲ್ಲಿರುವ ಎಟಿಎಂಗೆ ಮಳೆ ನೀರು ನುಗ್ಗಿರುವ ಪರಿಣಾಮ ಎಟಿಎಂ ಕೆಲಸ ಮಾಡುತ್ತಿಲ್ಲ. ಲೇಔಟ್ನಲ್ಲಿರುವ ಕೆನರಾ ಬ್ಯಾಂಕ್ ಮುಂದೆ ಇಂದು ಮುಂಜಾನೆ ಕೂಡ ಮಳೆ ನೀರು ಹರಿಯುತ್ತಿರುವುದರಿಂದ ಬ್ಯಾಂಕ್ನ ಲಾಕರ್ನಲ್ಲಿಟ್ಟಿರುವ ಪ್ರಮುಖ ದಾಖಲೆಗಳು ಹಾನಿಗೊಳಗಾಗುವ ಸಾಧ್ಯತೆಗಳಿವೆ.
ಕಳೆದ ಮೂರು ದಿನಗಳಿಂದ ಬಂದ್ ಆಗಿರುವ ಬ್ಯಾಂಕ್ ನಾವು ಕರೆ ಮಾಡಿದರೂ ಬ್ಯಾಂಕ್ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿ ವರುಷ ಈ ಏರಿಯಾದಲ್ಲಿ ಮಳೆಯಾದ್ರೆ ಇದೇ ಸಮಸ್ಯೆಈ ಬಾರಿಯಾದ್ರೂ ಬ್ಯಾಂಕ್ ಶಿಫ್ಟï ಮಾಡಲಿ ನಾಳೆ ಬ್ಯಾಂಕ್ ಓಪನ್ ಮಾಡಿ ದಾಖಲೆಗಳನ್ನು ಪರಿಶೀಲಿಸಲಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಬಿಬಿಎಂಪಿಯಿಂದ ಹೆಲ್ಪ್ ಲೈನ್ :
ನಗರದಲ್ಲಿ ಮಳೆಕಾಟ ಜೋರಾಗಿರುವುದರಿಂದ ಬಿಬಿಎಂಪಿ ಕಂಟ್ರೋಲ್ ರೂಮ್ಗಳ ಜೊತೆಗೆ ಪ್ರಾಣಿಗಳ ರಕ್ಷಣೆಗಾಗಿ ಸ್ಥಾಪಿಸಲಾಗಿದ್ದ 1533 ಹೆಲ್ಪ್ಲೈನ್ ನಂಬರ್ನ್ನು ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಮೊದಲು ನಾಯಿ, ಬೆಕ್ಕು, ಇತರೆ ಪ್ರಾಣಿಗಳ ಕುರಿತು ದೂರು ನೀಡಲು ಇದ್ದ 1533 ಹೆಲ್ಪï ಲೈನ್ ನಂಬರ್ಗೆ ಸಾರ್ವಜನಿಕರು ಕರೆ ಮಾಡಿ ಮಳೆ ಸಂಬಂಧ ದೂರು ನೀಡಬಹುದಾಗಿದೆ.
ಬಿಬಿಎಂಪಿ ಕಂಟ್ರೋಲ್ ರೂಮ್ ನಂಬರ್ 080 2266 0000 ದೂರು ಕೊಡಬಹುದು. ವಾಟ್ಸಪ್ ಹೆಲ್ಪï ಲೈನ್ 94806 85700 ಮೂಲಕ ಬಿಬಿಎಂಪಿ ದೂರು ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.