Sunday, December 22, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ-2024ಕ್ಕೆ ಚಾಲನೆ

ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ-2024ಕ್ಕೆ ಚಾಲನೆ

Flower show-2024 launched at Mysore Palace premises

ಮೈಸೂರು,ಡಿ.22- ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಅರಮನೆ ಫಲಪುಷ್ಪ ಪ್ರದರ್ಶನ-2024 ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ, ಬೊಂಬೆ ಮನೆ ಹಾಗೂ ಕುಸ್ತಿ ಪಂದ್ಯಾವಳಿಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪನವರು ಚಾಲನೆ ನೀಡಿದರು.

ಫಲಪುಷ್ಪ ಪ್ರದರ್ಶನಕ್ಕೆ 25 ಸಾವಿರ ಹೂವಿನ ಕುಂಡಗಳನ್ನು ಇಡಲಾಗಿದ್ದು, ಗುಲಾಬಿ, ಸೇವಂತಿಗೆ, ಜಲಿಯ ಸಾಲ್ವಿಯ, ಚೆಂಡು ಹೂ, ಸೂರ್ಯಕಾಂತಿ ಹೂವುಗಳು ಸೇರಿದಂತೆ ಹಲವು ಬಗೆಯ ಹೂವುಗಳನ್ನು ಇಲ್ಲಿ ಕಾಣಬಹುದಾಗಿದೆ. ಅರಮನೆ, ರಾಜ್ಯ ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಕಲಾಕೃತಿ, ಚಾಮುಂಡಿಬೆಟ್ಟದ ನಂದಿ ವಿಗ್ರಹ, ಪಕ್ಷಿಗಳು, ದೆಹಲಿಯ ಅಕ್ಷರಧಾಮ, ಕಾರ್ಗಿಲ್‌ ವಿಜಯಸ್ತಂಭ, ದಕ್ಷಿಣ ಕಾಶಿಯ ನಂಜುಂಡೇಶ್ವರ, ಗಂಡಭೇರುಂಡ, ಮುಮಡಿ ಕೃಷ್ಣರಾಜ ಒಡೆಯರ್‌ ಪ್ರತಿಕೃತಿ ಸೇರಿದಂತೆ ಹಲವು ವಿಭಿನ್ನ ಚಿತ್ತಾರಗಳನ್ನು ಹೂವುಗಳಲ್ಲಿ ಅರಳಿಸಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯ ಆವರಣದಲ್ಲಿ ಮೈಸೂರು ಅರಮನೆ ಮತ್ತು ರಾಜ ಮನೆತನಗಳ ಇತಿಹಾಸ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಬೊಂಬೆಗಳ ಪ್ರದರ್ಶನ ಹಾಗೂ ಅರಮನೆಯ ವರಾಹ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಬಂದಂತಹ ವೀಕ್ಷಕರ ಗಮನ ಸೆಳೆದವು.

ಖ್ಯಾತ ಹಿನ್ನಲೆ ಗಾಯಕ ಮಧುಬಾಲಕೃಷ್ಣನ್‌ ಮತ್ತು ತಂಡದವರಿಂದ ಆಯೋಜಿಸಲಾಗಿದ್ದ ಸಂಗೀತ ರಸಸಂಜೆ ಕಾರ್ಯಕ್ರಮವು ನೆರೆದಿದ್ದಂತಹ ಸಾವಿರಾರು ವೀಕ್ಷಕರನ್ನು ತನ್ನತ್ತ ಸೆಳೆದು ಮಧುರ ಸಂಗೀತಕ್ಕೆ ಮನಸೋಲುವಂತೆ ಮಾಡಿತು.ಫಲಪುಷ್ಪ ಪ್ರದರ್ಶನ ಹಾಗೂ ಅರಮನೆ ದೀಪಾಲಂಕಾರವು ಡಿ.21 ರಿಂದ 31 ರವರೆಗೆ ನಡೆಯಲಿದೆ.

ಆಗಮಿಸುವ ವೀಕ್ಷಕರಿಗೆ ಪ್ರವೇಶ ದರವನ್ನು ನಿಗದಿಪಡಿಸಿದ್ದು, ವಯಸ್ಕರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ 30 ರೂ., 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. ಗಳು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಫಲಪುಷ್ಪ ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಅರಮನೆ ವಿದ್ಯುತ್‌ ದೀಪಾಲಂಕಾರವು ಸಂಜೆ 7 ರಿಂದ 9 ರವರೆಗೆ ಇರಲಿದೆ.

ಈ ಸಂದರ್ಭದಲ್ಲಿ 2025ನೇ ಸಾಲಿನ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಟಿ. ಎಸ್‌‍.ಶ್ರೀವತ್ಸ ವಹಿಸಿದ್ದರು. ಶಾಸಕರಾದ ಜಿ.ಟಿ.ದೇವೇಗೌಡ, ಕೆ. ಹರೀಶ್‌ ಗೌಡ, ವಿಧಾನ ಪರಿಷತ್‌ ಸದಸ್ಯರಾದ ಡಾ.ಡಿ.ತಿಮಯ್ಯ, ಸಿ. ಎನ್‌. ಮಂಜೇಗೌಡ, ನಗರ ಪೊಲೀಸ್‌‍ ಆಯುಕ್ತರಾದ ಸೀಮಾ ಲಾಟ್ಕರ್‌, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹಾಗೂ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್‌‍. ಸುಬ್ರಮಣ್ಯ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಅವರು ಉಪಸ್ಥಿತರಿದ್ದರು.

RELATED ARTICLES

Latest News