ಹೂವು,ಹಣ್ಣಿನ ದರ ಏರಿಕೆಯಾದರೂ ಕುಗ್ಗದ ಹಬ್ಬದ ಉತ್ಸಾಹ

Social Share

ಬೆಂಗಳೂರು,ಅ.4- ಜನರಲ್ಲಿ ಹಬ್ಬದ ಸಡಗರ ಜೋರಾಗುತ್ತಿದ್ದಂತೆ ಹೂವು-ಹಣ್ಣು ಬೆಲೆ ಏರಿಕೆಯಾಗಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಜನ ಮಾರುಕಟ್ಟೆಗಳಿಗೆ ಮುಗಿಬಿದ್ದು ಹೂವು, ಹಣ್ಣು ಖರೀದಿಗೆ ಮುಂದಾಗಿರುವುದರಿಂದ ವ್ಯಾಪಾರಿಗಳು ಬೆಲೆ ಏರಿಕೆ ಮಾಡಿದ್ದಾರೆ. ಆದರೂ ಜನ ಭರ್ಜರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಜನ ಸಾಗರ ಕಂಡು ಬರುತ್ತಿದ್ದು, ಕೆ.ಆರ್.ಮಾರುಕಟ್ಟೆಯಲ್ಲಿ ಬೀದಿ ಬದಿಯಲ್ಲೇ ಭರ್ಜರಿ ವ್ಯಾಪಾರ ನಡೆಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸಂಚಾರ ಅಸಾಧ್ಯವಾದ ಹಿನ್ನಲೆಯಲ್ಲಿ ಮಾರುಕಟ್ಟೆ ಮೇಲ್ಸೇತುವೆಗಳ ಮೇಲೆ ವಾಹನಗಳನ್ನು ನಿಲ್ಲಿಸಿ ಜನ ಖರೀದಿಗೆ ತೆರಳಿದ್ದಾರೆ.

ಬೆಲೆ ಏರಿಕೆ: ಕಳೆದ ಮೂರು ದಿನಗಳಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಆಯುಧಪೂಜೆಗೆ ಅಗತ್ಯ ವಸ್ತುಗಳಾದ ಹೂವು, ಕುಂಬಳಕಾಯಿ, ಬಾಳೆ ಕಂಬ ದರ ಇಂದು ಡಬಲ್ ಆಗಿದೆ. ಖರೀದಿಗೆ ಬಂದವರು ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದರೆ, ಮಳೆ, ಬೆಳೆ ನಷ್ಟ ಹಿನ್ನೆಲೆ ದರ ಏರಿಕೆ ಅಂತಿರೋ ವ್ಯಾಪಾರಿಗಳು. ಕಳೆದ ವಾರ 10 ರೂ. ಇದ್ದ ಕೆ.ಜಿ ಕುಂಬಳಕಾಯಿ ಇಂದು 30-40 ರೂಗಳಿಗೆ ಏರಿಕೆಯಾಗಿದೆ. ಹೂವಿನ ದರ ದುಪ್ಪಟ್ಟಾಗಿದೆ.

ಮಲ್ಲಿಗೆ ಹೂ ಕೆಜಿಗೆ 1000 ಸಾವಿರ. ಸೇವಂತಿಗೆ 300-500,ಚೆಂಡು ಹೂ 150 ರೂ, ಕನಕಾಂಬರ 3 ಸಾವಿರ, ಸುಗಂಧರಾಜ 400 ಹಾಗೂ ಕಾಕಡ ಹೂ ಕೆಜಿಗೆ 700-800 ರೂ.ಗಳಾಗಿದೆ. ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾ ಹಬ್ಬ ಆಚರಿಸಲು ಸಾಧ್ಯವಾಗದ ಸಿಲಿಕಾನ್ ಸಿಟಿ ಜನ ಬೆಲೆ ಏರಿಕೆಯಾದರೂ ಭರ್ಜರಿ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ.

ನಾಳೆ ಮತ್ತು ನಾಡಿದ್ದು ಮತ್ತಷ್ಟು ಭರ್ಜರಿ ವ್ಯಾಪಾರವಾಗುವ ನಿರೀಕ್ಷೆ ಇರುವುದರಿಂದ ವ್ಯಾಪಾರಿಗಳು ಫುಲ್ ಖುಷ್ ಮೂಡಿನಲ್ಲಿದ್ದಾರೆ.

Articles You Might Like

Share This Article