ವಿದೇಶಿ ಪ್ರಜೆ ಬಂಧನ : 20 ಲಕ್ಷ ಬೆಲೆಯ ಮಾದಕ ವಸ್ತುಗಳ ವಶ

ಬೆಂಗಳೂರು,ಅ.27- ಡ್ರಗ್ಸ್ ಜಾಲದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಎಂಡಿಎಂಎ ಕ್ರಿಸ್ಟಲ್ ಮತ್ತು ಎಂಡಿಎಂಎ ಎಕ್ಸಟೆಸಿ ಮಾತ್ರೆಗಳು, ಕೃತ್ಯಕ್ಕೆ ಬಳಸಿದ್ದ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಡ್ರಗ್ಸ್ ಪೆಡ್ಲರ್ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‍ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ ಅವರ ತಂಡ ಮನೆ ಮೇಲೆ ದಾಳಿ ಮಾಡಿ ನೈಜಿರಿಯಾ ದೇಶದ ಪ್ರಜೆಯನ್ನು ಬಂಧಿಸಿದ್ದಾರೆ.

ಆರೋಪಿ ಸಹಚರ ಗೋವಾದಲ್ಲಿ ವಾಸವಾಗಿದ್ದು, ಆತ ಸಹ ಡ್ರಗ್ಸ್ ಪೆಡ್ಲರ್. ಪೋಲಾಂಡ್‍ನಿಂದ ಆತ ಮತ್ತೊಬ್ಬನಿಂದ ಪೋಸ್ಟ್ ಮುಖಾಂತರ ಮಾದಕ ವಸ್ತುಗಳನ್ನು ಗೋವಾಗೆ ತರಿಸಿಕೊಂಡು ಭಾರತ ದೇಶದ ವಿವಿಧ ಕಡೆಗಳಲ್ಲಿ ಸಬ್ ಡ್ರಗ್ ಪೆಡ್ಲರ್‍ಗಳಿಗೆ ಡ್ರಗ್ಸ್‍ಗಳನ್ನು ಸರಬರಾಜು ಮಾಡುತ್ತಿದ್ದುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಸಹಚರನಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿಕೊಂಡು ಬಂದು ನಗರದ ಐಟಿಬಿಟಿ ಉದ್ಯೋಗಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದು ಆರೋಪಿಯ ವಿಚಾರಣೆಯಿಂದ ತಿಳಿದುಬಂದಿರುತ್ತದೆ.

ತಲೆಮರೆಸಿಕೊಂಡಿರುವ ಸಹಚರರ ಪತ್ತೆ ಕಾರ್ಯ ಮುಂದುವರೆದಿದ್ದು, ರಾಮಮೂರ್ತಿನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಜಂಟಿ ಪೊಲೀಸ್ ಆಯುಕ್ತ ಮತ್ತು ಉಪಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಗೌತಮ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ವಿರೂಪಾಕ್ಷಸ್ವಾಮಿ ಮತ್ತು ಸಿಬ್ಬಂದಿ ಈ ಕಾರ್ಯಚರಣೆ ಕೈಗೊಂಡಿದ್ದರು.