ಭಾರತಕ್ಕೆ ಬರಲು ವಿದೇಶಿ ಪ್ರವಾಸಿಗರಲ್ಲಿ ಆತಂಕ

Social Share

ನವದೆಹಲಿ, ಫೆ.3- ಕೋವಿಡ್‍ನಿಂದಾಗಿ ಭಾರತದ ಪ್ರವಾಸೋದ್ಯಮ ಕ್ಷೇತ್ರ ಸೋರಗಿ ಹೋಗಿದ್ದು, ಕೋವಿಡ್ ನಂತರ ಚೇತರಿಕೆಯ ನಿರೀಕ್ಷೆಗಳಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಚುಕ್ಕೆ ಗುರುತಿನ ಪ್ರಶ್ನೆ ಕೇಳಿ, ಕೇಂದ್ರ ಸರ್ಕಾರ 2021ರ ಮಾರ್ಚ್‍ನಲ್ಲಿ ಐದು ಲಕ್ಷ ಪ್ರವಾಸಿ ವಿಸಾಗಳನ್ನು ಘೋಷಣೆ ಮಾಡಿತ್ತು. ಆದರೆ ಅವುಗಳಲ್ಲಿ ಕಡಿಮೆ ಪ್ರಮಾಣದ ವಿಸಾಗಳು ಮಾತ್ರ ವಿತರಣೆಯಾಗಿವೆ. ಸೋರಗುತ್ತಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಲಿಖಿತ ಉತ್ತರ ನೀಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕೃಷ್ಣರೆಡ್ಡಿ ಅವರು, ಕೇಂದ್ರ ಗೃಹ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ ವಿದೇಶಿ ಪ್ರವಾಸಿಗರಿಗಾಗಿ 2021ರ ಅಕ್ಟೋಬರ್ 6ರಿಂದ 2022ರ ಜನವರಿ 21ರವರೆಗೆ 56,392 ನಿಯಮಿತ ವಿಸಾಗಳನ್ನು, 1,11,141 ಇ-ವಿಸಾಗಳನ್ನು ವಿತರಣೆ ಮಾಡಿದೆ ಎಂದಿದ್ದಾರೆ.
ವಿಳಂಬವಾಗಿ ಕಳೆದ ವರ್ಷದ ಅಕ್ಟೋಬರ್ 6ರಿಂದ ಪ್ರವಾಸಿ ವಿಸಾಗಳನ್ನು ನೀಡಲು ಆರಂಭಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾಗಿದೆ. ಪ್ರಮುಖವಾಗಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಜಗತ್ತು ತಲ್ಲಣಿಸಿ ಹೋಗಿದೆ. ಭಾರತ ಸರ್ಕಾರ ಪ್ರವಾಸಿ ವಿದೇಶಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿದ್ದರು ಸುರಕ್ಷತೆ ದೃಷ್ಟಿಯಿಂದ ಆಯಾ ದೇಶಗಳು ತೆಗೆದುಕೊಂಡ ಕ್ರಮಗಳು ಪ್ರವಾಸೋದ್ಯಮಕ್ಕೆ ಅಡ್ಡಿ ಪಡಿಸಿವೆ ಎಂದಿದ್ದಾರೆ.
ಪ್ರವಾಸಿಗರು ಚಾರ್ಟ್‍ಡ್ ವಿಮಾನಗಳಲ್ಲಿ ಮಾತ್ರ ಆಗಮಿಸಲು ಅವಕಾಶ ಕಲ್ಪಿಸಲಾಗಿತ್ತು. ವಿಶ್ವ ಆರ್ಥಿಕ ವೇದಿಕೆ ಅಕ್ಟೋಬರ್ 15ರಿಂದ ನವೆಂಬರ್ 15ರ ವರೆಗೆ ಪ್ರವಾಸಿಗರಿಗಾಗಿ ವೈಯಕ್ತಿಕ ವಿಮಾನಗಳ ಸೌಲಭ್ಯ ಕಲ್ಪಿಸಿತ್ತು. ಈ ನಡುವೆ ರೂಪಾಂತರಿ ಸೋಂಕು ಓಮಿಕ್ರಾನ್ ಹರಡಲಾರಂಭಿಸಿದ್ದರಿಂದ ಸುರಕ್ಷತಾ ದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯ ಪ್ರಕಾರ 2021ರ ಡಿಸೆಂಬರ್ 15ರ ನಂತರ ಸಾಮಾನ್ಯ ವಿಮಾನಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.
ಆಯ್ದ ವಿದೇಶಿ ಪ್ರವಾಸಿಗರಿಗೆ ಸೀಮಿತ ವಿಮಾನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹಲವು ರೀತಿಯ ನಿರ್ಬಂಧಗಳಿವೆ. ದೇಶಿಯವಾಗಿ ಸೋಂಕು ಹರಡುವಿಗೆ ಹೆಚ್ಚಿರುವುದರಿಂದ ವಿದೇಶೀಗರು ಭಾರತಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್ ಮತ್ತು ಅದರ ರೂಪಾಂತರ ಸೋಂಕುಗಳ ಅಪಾಯದ ಪ್ರಮಾಣ ಕಡಿಮೆಯಾದ ಮೇಲೆ ಪ್ರವಾಸೋದ್ಯಮ ಕ್ಷೇತ್ರ ಸಹಜ ಸ್ಥಿತಿಗೆ ಮರಳಬಹುದು ಮತ್ತು ಸುಧಾರಿಸಬಹುದು ಎಂದು ಸಚಿವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Articles You Might Like

Share This Article